ನೀಲೇಕಣಿ ತಲುಪಿದ ಗಡಿ ಮಾರಿ

13SIRSI4
Published on

ಶಿರಸಿ: ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪತ್ತಾಗುವ ಘಟನೆಗಳು ನಡೆಯದಿರಲೆಂದು ಪ್ರಾರ್ಥಿಸಿ ಗಡಿ ಮಾರಿಯನ್ನು ಮತ್ತೊಂದು ಗ್ರಾಮದ ಗಡಿಗೆ ಬಿಟ್ಟು ಬರುವ ಸಂಪ್ರದಾಯ ಚಾಲ್ತಿಯಲ್ಲಿದೆ. ಇಲ್ಲಿನ ಮಾರಿಕಾಂಬಾ ದೇವಾಲಯದಿಂದಲೂ ಈ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ನಡೆಸಲಾಯಿತು.

ಯುಗಾದಿ ಹಬ್ಬಕ್ಕೂ ಮೊದಲು ಬನವಾಸಿ ರಸ್ತೆಯ ಶಿರಸಿ ಗ್ರಾಮದ ಗಡಿಯಲ್ಲಿ ಬಿಡಲಾಗಿದ್ದ ಗಡಿ ಮಾರಿಯನ್ನು ಸಂಪ್ರದಾಯದಂತೆ ನೀಲೇಕಣಿ ಗ್ರಾಮದ ಗಡಿಯವರೆಗೆ ಕಳುಹಿಸುವ ಪದ್ಧತಿ ಕೋವಿಡ್-19 ಲಾಕ್​ಡೌನ್ ಕಾರಣ ನೆರವೇರದೆ ಸ್ಥಗಿತಗೊಂಡಿತ್ತು. ಈ ಆಚರಣೆಯನ್ನು ಶುಕ್ರವಾರ ಮಾರಿಕಾಂಬಾ ದೇವಾಲಯದ ಬಾಬದಾರ ಪ್ರಮುಖರು, ಆಡಳಿತ ಮಂಡಳಿ ಸದಸ್ಯರು ಗಡಿಮಾರಿ ಕಳುಹಿಸುವ ಸಾಂಪ್ರದಾಯಿಕ ಆಚರಣೆಯ ವಿಧಿವಿಧಾನ ನಡೆಸಿದರು.

ಪ್ರತ್ಯೇಕ ಮೂರ್ತಿಯನ್ನು ಮಂಟಪದಲ್ಲಿಟ್ಟು ಬಾಳೆಕಂಬ, ಮಾವಿನ ಎಲೆಗಳಿಂದ ಶೃಂಗರಿಸಿ, ಪೂಜೆ ಮಾಡಿ, ಉಡಿ ತುಂಬಿ ಊರೊಳಗೆ ಮೆರವಣಿಗೆ ನಡೆಸಿ ಗಡಿಯನ್ನು ದಾಟಿಸಿ ಸಂಪ್ರದಾಯ ಪೂರ್ಣಗೊಳಿಸಿದರು.

ಈ ವೇಳೆ ಮಾರಿಕಾಂಬೆಯ ಪೂಜಾರಿ ಬಾಬದಾರರಾದ ನಾಗರಾಜ ಪೂಜಾರಿ ಗ್ರಾಮ, ನಾಡು, ದೇಶ, ಪ್ರಪಂಚವನ್ನು ಕರೊನಾ ಮುಕ್ತಗೊಳಿಸಿ, ಯಾವುದೇ ವಿಪತ್ತು ಬಾರದಂತೆ, ಮಳೆ, ಬೆಳೆ ಉತ್ತಮವಾಗಿ ಬಂದು ಸಮೃದ್ಧಿಯಾಗಿಸುವಂತೆ ಹರಸು ಎಂದು ಎಲ್ಲರ ಪರವಾಗಿ ಮಾರಿಕಾಂಬೆಯಲ್ಲಿ ಪ್ರಾರ್ಥಿಸಿದರು.

ಆಚರಣೆ ವೇಳೆ ಬಾಬದಾರ ಪ್ರಮುಖರಾದ ಅಜಯ ನಾಡಿಗ, ಜಗದೀಶ ಗೌಡ, ಜಗದೀಶ ಕುರುಬರ, ರಮೇಶ ದಬ್ಬೆ, ಸತೀಶ ಸಾಲೇರ, ಗಣೇಶ, ಆಡಳಿತ ಮಂಡಳಿಯ ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿ ಶಾಂತಾರಾಮ ಹೆಗಡೆ ಹಾಗೂ ದೇವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net