ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
ರಾಜ್ಯದಲ್ಲಿ ಹೆಚ್ಚು ನೀಲಗಿರಿ ಬೆಳೆದಿರುವ ಕೋಲಾರದಲ್ಲಿ ನಿತ್ಯವೂ ತೋಪುಗಳಿಗೆ ಬೆಂಕಿ ಬೀಳುತ್ತಿದೆ. ಇದು ಅಕ್ಕಪಕ್ಕದ ಬೆಳೆ, ಮನೆ, ಜೀವಸಂಕುಲಕ್ಕೆ ಹಾನಿ ತಂದೊಡ್ಡುತ್ತಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ.
ಜಿಲ್ಲೆಯಲ್ಲಿ 37 ಸಾವಿರ ಹೆಕ್ಟೇರ್ ಅರಣ್ಯವಿದ್ದು, ಇದರಲ್ಲಿ ಶೇ.40ಕ್ಕೂ ಹೆಚ್ಚು ನೀಲಗಿರಿ ಪ್ಲಾಂಟೇಷನ್ ಇದೆ. ಇನ್ನು ರೈತರು ಜಮೀನುಗಳಲ್ಲಿ 16,566 ಹೆಕ್ಟೇರ್ನಲ್ಲಿ ನೀಲಗಿರಿ ಬೆಳೆದಿದ್ದಾರೆ. ನೀಲಗಿರಿ ಜತೆ ಕುರುಚಲು ಗಿಡಗಳ ಪೊದೆಗಳು, ಹುಲ್ಲು ಬೆಳೆದಿದೆ. ಬಿಸಿಲಿನ ಝಳ ಏರಿದ್ದು, ವೇಗವಾದ ಗಾಳಿ ಬೀಸುತ್ತಿರುವುದು ಗಮನಿಸಿ ಕಿಡಿಗೇಡಿಗಳು, ದನಕರು ಮತ್ತು ಕುರಿ ಮೇಯಿಸುವವರು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಸಹಸ್ರಾರು ಎಕರೆ ತೋಪುಗಳು, ಪಕ್ಕದ ಜಮೀನುಗಳಲ್ಲಿನ ಬೆಳೆ ಮತ್ತಿತರ ವಸ್ತುಗಳು ಬೆಂಕಿ ಆಹುತಿಯಾಗುತ್ತಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಕೃಷಿ ಭೂಮಿಗಿಂತಲೂ ಹೆಚ್ಚು ನೀಲಗಿರಿ ಕಾಡಿದೆ. ನೀಲಗಿರಿ ತೆರವು ಕೂಗು ದಶಕಗಳಿಂದ ಕೇಳಿ ಬರುತ್ತಿದ್ದರೂ, ಅರಣ್ಯ ಇಲಾಖೆ ಪ್ರತಿ ವರ್ಷ ನಿಗದಿಪಡಿಸಿದಷ್ಟು ಮಾತ್ರ ಬುಡಸಮೇತ ಕಿತ್ತು ಹಾಕುತ್ತಿದೆ. ಬೆಳೆಗಾರರು ಬುಡಕೀಳಿಸಲು ಹೆಚ್ಚು ಖರ್ಚು ಬರುವುದರಿಂದ ಮತ್ತು ಶ್ರಮ, ಖರ್ಚಿಲ್ಲದೆ ಆದಾಯ ತಂದುಕೊಡುತ್ತಿರುವುದರಿಂದ ತೆರವಿಗೆ ಮುಂದಾಗುತ್ತಿಲ್ಲ. ಪಕ್ಕದ ಜಮೀನಿನಲ್ಲಿ ನೀಲಗಿರಿಯಿದ್ದರೆ, ಜಮೀನಿನಲ್ಲಿ ಬೆಳೆ ಬೆಳೆಯಲಾಗದು ಎಂದು ಕೆಲವರು, ಮಳೆಗಾಲಕ್ಕೆ ಹುಲ್ಲು ಬೆಳೆಯಲೆಂದು ಇನ್ನೂ ಕೆಲವರು, ಕೆಲವೆಡೆ ಟೊಮ್ಯಾಟೊ ಮತ್ತಿತರ ಬೆಳೆ ತ್ಯಾಜ್ಯಕ್ಕೆ ಹಾಕುವ ಬೆಂಕಿಯೂ ನೀಲಗಿರಿ ತೋಪುಗಳನ್ನು ಭಸ್ಮ ಮಾಡುತ್ತಿದೆ.
ಮಾಲೂರು ತಾಲೂಕಿನಲ್ಲಿ 7,892 ಹೆಕ್ಟೇರ್, ಕೋಲಾರ&4,339, ಬಂಗಾರಪೇಟೆ&1,987, ಕೆಜಿಎಫ್&983, ಮುಳಬಾಗಿಲು&783 ಮತ್ತು ಶ್ರೀನಿವಾಸಪುರದಲ್ಲಿ ಕೇವಲ 580 ಹೆಕ್ಟೇರ್ನಲ್ಲಿ ರೈತರು ನೀಲಗಿರಿ ಬೆಳೆದಿದ್ದಾರೆ. ಪ್ರಸ್ತುತ ಮಾಲೂರು ತಾಲೂಕಿನಲ್ಲಿ ಶೇ.70ಕ್ಕೂ ಹೆಚ್ಚು ನೀಲಗಿರಿ ತೋಪುಗಳು ಬೆಂಕಿಗೆ ಆಹುತಿಯಾಗಿವೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ತುಂಬಿಸಿದ ಬಳಿಕ 2018&19ರಿಂದ ಈಚೆಗೆ ನೀಲಗಿರಿ ತೋಪುಗಳಿಗೆ ಬೆಂಕಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ವ್ಯವಸಾಯದ ಕಡೆ ರೈತರು ಒಲವು ತೋರುತ್ತಿರುವುದೂ ಪ್ರಮುಖ ಕಾರಣ.
ಪರಿಹಾರವಿಲ್ಲ, ದೂರು ಕೊಡುತ್ತಿಲ್ಲ: ಸರ್ಕಾರ ಅರಣ್ಯಭೂಮಿಯಲ್ಲಿ ನೀಲಗಿರಿ ಬೆಳೆ ಮಾಡುವುದಕ್ಕೆ 2016ರಲ್ಲಿ ನಿಷೇಧ ಹೇರಿದ್ದು, ಜಿಲ್ಲೆಯಲ್ಲಿ ಅಲ್ಲಿಂದೀಚೆಗೆ ಹೊಸದಾಗಿ ಅರಣ್ಯ ಭೂಮಿಯಲ್ಲಷ್ಟೇ ಅಲ್ಲ, ರೈತರೂ ಸಸಿ ನಾಟಿ ಮಾಡುತ್ತಿಲ್ಲ. ಆದರೆ ಬೆಳೆದಿರುವ ತೋಪುಗಳು 4&5 ವರ್ಷಕ್ಕೊಮ್ಮೆ ಕಟಾವಾಗುತ್ತಿದ್ದು, ಬೆಳೆಗಾರರಿಗೆ ಹೇರಳ ಹಣ ತಂದುಕೊಡುತ್ತಿವೆ. ನಿಷೇಧದ ಅಂಜಿಕೆಯೋ, ಪರಿಹಾರ ಸಿಗದೆಂಬ ಮನೋಭಾವವೋ, ಒಟ್ಟಾರೆ ಬೆಂಕಿಯಿಂದ ನಷ್ಟ ಹೊಂದಿದ ಬೆಳೆಗಾರರು ಪರಿಹಾರ ಕೇಳುತ್ತಿಲ್ಲ. ದೂರು ಕೊಡಲು ಹೋಗುತ್ತಿಲ್ಲ. ಹೆಚ್ಚಿನ ಅನಾಹುತ ತಡೆಗೆ ಅಗ್ನಿಶಾಮಕ ದಳಕ್ಕೆ ಕರೆ ಮಾಡುವುದು ಬಿಟ್ಟರೆ ಮತ್ತಿನ್ಯಾವ ಕೆಲಸವನ್ನೂ ಜನರು ಮಾಡುತ್ತಿಲ್ಲ.
ಅರಣ್ಯಗಳು ಸೇಫ್: ಜಿಲ್ಲೆಯಲ್ಲಿ ನೂರಾರು ಬೆಟ್ಟ, ಗುಡ್ಡಗಳಿದ್ದು, ಇವುಗಳ ಜತೆಗೆ ಅರಣ್ಯ ಭೂಮಿ ಸೇರಿದರೆ 60 ಸಾವಿರ ಹೆಕ್ಟೇರ್ ಇಲಾಖೆ ಸುಪರ್ದಿಗೆ ಒಳಪಡುತ್ತದೆ. ಬೆಟ್ಟಗಳಲ್ಲಿ ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಭೂಮಿ ದೊಡ್ಡಪ್ರಮಾಣದಲ್ಲಿ ಅಗ್ನಿಗೆ ಆಹುತಿಯಾಗಿಲ್ಲ. ಶ್ರೀನಿವಾಸಪುರ, ಕಾಮಸಮುದ್ರಂ ಸಮೀಪ ದೊಡ್ಡ ಕಾಡುಗಳಿದ್ದು, ನೀಲಗಿರಿ ಜತೆಗೆ ಆಲ, ಹೊಂಗೆ, ಅರಳಿ, ಚಿಗರೆ, ಬೊಪ್ಪಾಲೆ, ಬೇವು, ಕಕ್ಕೆ, ನೇರಳೆ, ಶ್ರೀಗಂಧ ಮುಂತಾದ ಸಸ್ಯರಾಶಿಯಿದೆ. ಬೆಟ್ಟ, ಕಾಡು ಮತ್ತು ರೈತರ ನೀಲಗಿರಿ ತೋಪುಗಳಲ್ಲಿ ಚಿರತೆ, ಹಂದಿ, ಜಿಂಕೆ, ನವಿಲು, ಮೊಲ, ಕಾಡುಕೋಳಿ ಸೇರಿ ಜೀವಸಂಕುಲವಿದೆ. ಎಲ್ಲಿಯಾದರೂ ಬೃಹತ್ ಪ್ರಮಾಣದಲ್ಲಿ ಬೆಂಕಿ ಬಿದ್ದರೆ, ತಂತ್ರಜ್ಞಾನದ ನೆರವಿನಿಂದ ಕೂಡಲೇ ಇಲಾಖೆಗೆ ಮಾಹಿತಿ ಮುಟ್ಟುತ್ತದೆ. ಸಿಬ್ಬಂದಿ ಕೊರತೆಯಿದ್ದರೂ ಅರಣ್ಯಗಳ ಸುತ್ತ ಬೆಂಕಿ ಹಚ್ಚಿ ತರಗನ್ನು ಸುಟ್ಟು "ಫೈರ್ ಲೈನ್' ಮಾಡಿದ್ದಾರೆ. ಇದರಿಂದಾಗಿ ಅರಣ್ಯಗಳ ಸಮೀಪಕ್ಕೆ ಬೆಂಕಿ ಬಂದರೂ ಒಳಕ್ಕೆ ಪ್ರವೇಶಿಸುವುದಕ್ಕೆ ತಡೆ ಬೀಳುತ್ತಿದೆ.
ವ್ಯಾಪಾರಿಗಳ ಕೈವಾಡ : ಬಹುತೇಕ ಕಡೆ ನೀಲಗಿರಿ ತೋಪುಗಳಿಗೆ ಬೆಂಕಿ ಬೀಳುವುದಕ್ಕೆ ಮರಕಡಿದು ಸಾಗಿಸುವ ವ್ಯಾಪಾರಿಗಳು ಕಾರಣ ಎಂಬ ಮಾತುಗಳು ರೈತಾಪಿ ವಲಯದಿಂದ ಕೇಳಿ ಬರುತ್ತಿದೆ. ಬೆಂಕಿ ತಾಗಿದ ಮರಗಳು ಒಣಗಿಹೋಗುವುದರಿಂದ ರೈತರು ಕೇಳಿದಷ್ಟು ಹಣಕ್ಕೆ ಕೊಡುತ್ತಾರೆಂಬ ದುರಾಸೆಯಿಂದ ಇಂತಹ ಕೃತ್ಯಕ್ಕೆ ಇಳಿದಿದ್ದಾರೆ ಅಥವಾ ಪ್ರತಿಗ್ರಾಮಗಳಲ್ಲಿರುವ ದಲ್ಲಾಳಿಗಳಿಗೆ ಪ್ರಚೋದನೆ ನೀಡಿ ಬೆಂಕಿ ಹಾಕಿಸುವ ಕೆಲಸ ಕೆಲವು ಕಡೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಮಳೆ ಬಂದಾಗ ಹುಲ್ಲು ಚಿಗುರುತ್ತದೆ ಎಂದು ಬೆಂಕಿ ಹಚ್ಚುವುದು ಸರಿಯಲ್ಲ. ಜಿಲ್ಲೆಯ ಅರಣ್ಯಗಳಲ್ಲಿ ಪ್ರತಿವರ್ಷ 1ಸಾವಿರ ಎಕರೆ ನೀಲಗಿರಿ ತೆರವುಗೊಳಿಸುತ್ತಿದ್ದು, ಹೊಸದಾಗಿ ನಾಟಿ ಮಾಡ್ತಿಲ್ಲ. ಐದಾರು ವರ್ಷದಲ್ಲಿ ಸಂಪೂರ್ಣ ತೆರವುಗೊಳಿಸುತ್ತೇವೆ. ಈಗಾಗಲೇ 10ಸಾವಿರ ಹೆಕ್ಟೇರ್ನಲ್ಲಿ ತೆರವುಗೊಳಿಸಲಾಗಿದೆ. ವಿ.ಏಡುಕೊಂಡಲು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ
ಜಿಲ್ಲೆಯಲ್ಲಿ ನಿತ್ಯ ಕನಿಷ್ಠ 5ರಿಂದ 10ಕಡೆ ಬೆಂಕಿ ಬೀಳುತ್ತಿದೆ. ಫೆಬ್ರವರಿ ಮಾಹೆಯಲ್ಲಿ 300ಕ್ಕೂ ಹೆಚ್ಚು ಅಗ್ನಿ ಅವಘಡ ಕರೆ ಬಂದಿದೆ. ಕೋಲಾರ ತಾಲೂಕಿನಲ್ಲಿ 100, ಮಾಲೂರಿನಲ್ಲಿ 73 ಬೆಂಕಿ ಅನಾಹುತ ಸಂಭವಿಸಿವೆ. ಜನರು ನೀಲಗಿರಿ ತೋಪುಗಳು, ಬೆಟ್ಟ, ಅರಣ್ಯಕ್ಕೆ ಬೆಂಕಿ ಹಚ್ಚುವುದು ಮಾಡಬಾರದು. ಬಿ.ಎಂ.ರಾಘವೇಂದ್ರ ಅಗ್ನಿಶಾಮಕ ಅಧಿಕಾರಿ