

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು 1 ತಿಂಗಳೊಳಗೆ ತೆರವುಗೊಳಿಸಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಿದೆ.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ತಹಸೀಲ್ದಾರ್ ಹಾಗೂ ತಾಪಂ ಇಒ ಅವರನ್ನೊಂಡ ಸಭೆಯಲ್ಲಿ ನೀಲಗಿರಿ ಮರಗಳ ತೆರವುಗೊಳಿಸುವಲ್ಲಿ ನಿರ್ಲಕ್ಷೃ ತೋರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಆರ್.ಲತಾ, 1 ತಿಂಗಳ ಗಡವು ನೀಡಿದರು.
ನೀಲಗಿರಿ ಮರಗಳು ಹೆಚ್ಚು ನೀರು ಹೀರಿಕೊಳ್ಳುವುದರಿಂದ ಅಂತರ್ಜಲಮಟ್ಟ ಕುಸಿತ ಮತ್ತು ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಈಗಾಗಲೇ ಜಿಲ್ಲೆ ಬರಕ್ಕೆ ತುತ್ತಾಗುತ್ತಿದೆ, ನೀರಿನ ಅಭಾವದಿಂದಾಗಿ ರೈತರು ಕಂಗಲಾಗಿದ್ದಾರೆ, ಆದರೂ ಈ ಭಾಗದಲ್ಲಿ ನೀಲಗಿರಿ ಮರಗಳೇ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ನೀಲಗಿರಿ ಮರಗಳಿಗೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್, ಇಒ, ಪಿಡಿಒಗಳು ಸ್ಥಳೀಯ ಗ್ರಾಪಂ ಅಧ್ಯಕ್ಷರೊಂದಿಗೆ ಸಭೆ ನಡೆಸಬೇಕು. ಸರ್ಕಾರಿ ಹಾಗೂ ಖಾಸಗಿ ಒಡೆತನದ ಭೂಮಿಯಲ್ಲಿರುವ ನೀಲಗಿರಿ ಮರಗಳ ಸಂಖ್ಯೆ ಪಟ್ಟಿಮಾಡಿ, 1 ತಿಂಗಳೊಳಗೆ ಸಂಪೂರ್ಣವಾಗಿ ತೆರವುಗೊಳಿಸಬೇಕು ತಾಕೀತು ಮಾಡಿದರು.ಖಾಸಗಿ ಜಮೀನಿನಲ್ಲಿನ ನೀಲಗಿರಿ ಮರ ತೆರವು ಮಾಡದಿದ್ದರೆ ಪಹಣಿಯಲ್ಲಿ ಸರ್ಕಾರಿ ಬೀಳು ಜಮೀನು ಎಂದು ನಮೂದಿಸಲಾಗುತ್ತದೆ, ಆಗ ರೈತರು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವರಲ್ಲಿ ಅರಿವು ಮೂಡಿಸಿ, ಮರಗಳ ಕಟಾವಿಗೆ ಪ್ರೋತ್ಸಾಹಿಸಬೇಕು. ಬುಡಸಮೇತ ಕಿತ್ತು ಹಾಕಿದ ಜಾಗದಲ್ಲಿ ಇತರ ಸಸಿಗಳನ್ನು ನೆಡಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಇತರರಿದ್ದರು.