

ದೇವನಹಳ್ಳಿ: ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಕಂಟಕವಾಗಿರುವ ನೀಲಗಿರಿ ತೆರವಿಗೆ ರೈತರ ಮನವೊಲಿಕೆ ಕಷ್ಟವಾಗಿದೆ.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಹ ನೀಲಗಿರಿ ತೆರವಿಗೆ ಸಾಕಷ್ಟು ಶ್ರಮಿಸುತ್ತಿರುವುದರ ನಡುವೆಯೇ ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ದೇವನಹಳ್ಳಿ ಭಾಗದಲ್ಲಿ ರೈತರ ಸಭೆ ನಡೆಸಿ ಜಾಗೃತಿ ಮೂಡಿಸುವ ಮೂಲಕ ನೀಲಗಿರಿ ತೆರವಿಗೆ ಶ್ರಮಿಸುತ್ತಿದ್ದಾರೆ.
ಬೀರಸಂದ್ರದ ಜಿಲ್ಲಾಡಳಿತ ಭವನದ ಸಮೀಪದ ಸಿದ್ದಾಚಾರ್ ಎಂಬ ರೈತನ 3 ಎಕರೆಯಲ್ಲಿ ಬೆಳೆದಿದ್ದ ನೀಲಗಿರಿ ತೆರವಿಗೆ ರೈತನ ಮನವೊಲಿಸುವಲ್ಲಿ ಶನಿವಾರ ಯಶಸ್ವಿಯಾಗಿದ್ದು, ತೆರವುಗೊಳಿಸಿದರು. ನೀಲಗಿರಿ ತೆರವಿಗೆ ಎಲ್ಲ ರೈತರು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಗೋಗೆರೆಯುವ ಸ್ಥಿತಿ: ನೀಲಗಿರಿ ಮರಗಳಿಂದಾಗಿ ಒಂದೂವರೆ ಸಾವಿರ ಅಡಿ ಕೊರೆದರೂ ಜಲಮೂಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಸ್ಕರಿಸಿದ ಬೆಂಗಳೂರು ಕೊಳಚೆ ನೀರನ್ನಾದರೂ ಕೆರೆಗಳಿಗೆ ಹರಿಸಿ ಎಂದು ಗೋಗೆರೆಯುವ ಸನ್ನಿವೇಶ ಎದುರಾಗಿದೆ ಎಂದು ಜಿಪಂ ಸದಸ್ಯ ಕೆ.ಸಿ.ಮಂಜುನಾಥ್ ಬೇಸರ ತೋಡಿಕೊಂಡರು.
ದಿನದಿಂದ ದಿನಕ್ಕೆ ಅಂತರ್ಜಲಮಟ್ಟ ಕುಸಿಯುತ್ತಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 150 ಎಕರೆ ನೀಲಗಿರಿ ತೆರವುಗೊಳಿಸಲಾಗಿದೆ, ಉಳಿದಿರುವ ನೀಲಗಿರಿ ತೆರವುಗೊಳಿಸಲು ರೈತರ ಮನವೊಲಿಸಲಾಗುತ್ತಿದೆ. ಹಂತಹಂತವಾಗಿ ರೈತರು ನೀಲಗಿರಿ ತೆಗೆದುಹಾಕಲಿದ್ದಾರೆ ಎಂದರು.
ನೀಲಗಿರಿ ತೆರವಿಗೆ ಆರ್ಥಿಕ ನೆರವು ನೀಡಿದ ಎಸ್.ಕೆ.ಗ್ರೂಪ್‌ನ ಮಾಲೀಕ ದ್ಯಾವರಹಳ್ಳಿ ಶಾಂತಕುಮಾರ್, ಚಂದ್ರು, ಬಿಜೆಪಿ ತಾಲೂಕು ಮಾಜಿ ಉಪಾಧ್ಯಕ್ಷ ಕೆ.ಸಿ.ಮುನಿರಾಜು ಮತ್ತಿತರರಿದ್ದರು.
ಸ್ಥಳೀಯರ ರೈತರ ಮನವೊಲಿಸಿ ನೀಲಗಿರಿ ತೆರವುಗೊಳಿಸಲಾಗುತ್ತಿದೆ. ಆದರೆ ಈ ಭಾಗದಲ್ಲಿ ಜಮೀನು ಇದ್ದು ಬೇರೆಡೆ ವಾಸವಾಗಿರುವ ಮಾಲೀಕರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆದರೂ ರೈತರ ಮನವೊಲಿಸಿ ಹಂತಹಂತವಾಗಿ ನೀಲಗಿರಿ ತೆರವಿಗೆ ಶ್ರಮಿಸಲಾಗುತ್ತಿದೆ. ಕೆ.ಸಿ.ಮಂಜುನಾಥ್, ಜಿಪಂ ಸದಸ್ಯ