

ಲಕ್ಷ್ಮೇಶ್ವರ: ‘ಈ ಜವಾರಿ ನೀರ್ಲ ಹಣ್ಣ ಬಾಳ ರುಚಿ ಐತ್ರಿ. ಬೇಕಂದಾಗ ಸಿಗೋದಿಲ್ಲ. ವರ್ಷಕ್ಕ ಒಂದ ಸರತಿ ಸಿಗತೆôತಿ. ಮೊದ್ಲ ಇದ್ದಷ್ಟು ಗಿಡ ಈಗ ಇಲ್ಲ. ಎಲ್ಲಾ ಕಡದಬಿಟ್ಟಾರ. ಅಲ್ಲೊಂದು ಇಲ್ಲೊಂದು ಉಳಕೊಂಡಾವ. ಗಿಡದ ಮಾಲಕರಿಗೆ ದುಡ್ಡು ಕೊಟ್ಟು ಹಣ್ಣು ತಂದು ಮಾರೀದ್ರ ಸಿಗೋದು 200 ರೂಪಾಯ್ರಿ. ನೀರ್ಲ ಹಣ್ಣ ತಿಂದ್ರ ಕರೊನಾ ಗಿರೋನಾ ಬರಂಗಿಲ್ರಿ. ಬರ್ರಿ ಪಾವ ಕಿಲೋ ಹಣ್ಣಿಗೆ ಬರೀ 50 ರೂಪಾಯ್ರಿ...’
ಹುಲ್ಲೂರು ಗ್ರಾಮದ ನೇರಳೆ ಹಣ್ಣು ಮಾರಾಟಗಾರ ಬೋಜಪ್ಪ ಲಮಾಣಿ ವಿವರಿಸಿದ್ದು ಹೀಗೆ...
ವರ್ಷಕ್ಕೊಮ್ಮೆ ಸಿಗುವ ಔಷಧ ಗುಣವುಳ್ಳ ನೇರಳೆ ಹಣ್ಣಿಗೆ ಈಗ ಪಟ್ಟಣದ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದ್ದು, ಬೆಲೆಯೂ ಹೆಚ್ಚಳವಾಗಿದೆ. ಕರೊನಾ ಭೀತಿಯ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಗುಣವಿರುವ ಈ ನೇರಳೆ ಹಣ್ಣಿನ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ.
ತಾಲೂಕಿನ ಸಂಕದಾಳ, ಹುಲ್ಲೂರು, ಬಿಜ್ಜೂರು, ಅಂಕಲಿ, ಕೊಕ್ಕರಗುಂದಿ, ಬೂದಿಹಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೇರಳೆ ಹಣ್ಣಿನ ಮರಗಳಿವೆ. ನೇರಳೆ ಗಿಡಗಳನ್ನು ಹಳ್ಳದ ದಂಡೆ, ಜಮೀನು ಮತ್ತು ತೋಟಗಳ ಬದುವುಗಳಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯವರ ಸಹಕಾರದಿಂದ ತೋಟಗಾರಿಕೆಯಲ್ಲಿ ಮಿಶ್ರಬೆಳೆಯಾಗಿ ಬೆಳೆಯಲು ರೈತರು ಮುಂದಾಗಿದ್ದಾರೆ.
ಮಾವಿನ ಹಣ್ಣಿನ ಸೀಜನ್ ಮುಗಿಯುವ ಹೊತ್ತಿಗೆ, ಅಂದರೆ ಜೂನ್ ತಿಂಗಳಿಗೆ ಹಲಸಿನ ಹಣ್ಣಿನ ಜತೆಗೆ ಮಾರುಕಟ್ಟೆ ಪ್ರವೇಶಿಸುವ ನೇರಳೆ ಹಣ್ಣಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬಹುತೇಕ ತಾಂಡಾ ಪ್ರದೇಶಗಳ ಜನರು ಈ ಹಣ್ಣನ್ನು ಸಂಗ್ರಹಿಸಿ ಬುಟ್ಟಿಗಳಲ್ಲಿ ಮಾರಾಟಕ್ಕೆ ತರುತ್ತಿದ್ದಾರೆ. ಕಳೆದ ವರ್ಷ ಪ್ರತಿ ಕೆ.ಜಿ.ಗೆ 150 ರೂಪಾಯಿಗೆ ಮಾರಾಟವಾಗಿದ್ದರೆ ಈ ವರ್ಷ 200 ರೂ.ವರೆಗೆ ಮಾರಾಟವಾಗುತ್ತಿದೆ.
ಈ ಜವಾರಿ ನೀರ್ಲ ಹಣ್ಣ ಬಾಳ ರುಚಿ ಐತ್ರಿ. ಬೇಕಂದಾಗ ಸಿಗೋದಿಲ್ಲ. ವರ್ಷಕ್ಕ ಒಂದ ಸರತಿ ಸಿಗತೆôತಿ. ಮೊದ್ಲ ಇದ್ದಷ್ಟು ಗಿಡ ಈಗ ಇಲ್ಲ. ಎಲ್ಲಾ ಕಡದಬಿಟ್ಟಾರ. ಅಲ್ಲೊಂದು ಇಲ್ಲೊಂದು ಉಳಕೊಂಡಾವ. ಗಿಡದ ಮಾಲಕರಿಗೆ ದುಡ್ಡು ಕೊಟ್ಟು ಹಣ್ಣು ತಂದು ಮಾರೀದ್ರ ಸಿಗೋದು 200 ರೂಪಾಯ್ರಿ. ನೀರ್ಲ ಹಣ್ಣ ತಿಂದ್ರ ಕರೊನಾ ಗಿರೋನಾ ಬರಂಗಿಲ್ರಿ. ಬರ್ರಿ ಪಾವ ಕಿಲೋ ಹಣ್ಣಿಗೆ ಬರೀ 50 ರೂ. ಎನ್ನುತ್ತಿದ್ದ. ಬೋಜಪ್ಪ ಲಮಾಣಿ ನೇರಳೆ ಹಣ್ಣು ಮಾರಾಟಗಾರ, ಹುಲ್ಲೂರು
ಹಣ್ಣಿನಲ್ಲಿದೆ ಔಷಧ ಗುಣ
ಹಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಷ್ ಅಂಶ ಇರುವುದರಿಂದ ವಿಶೇಷವಾಗಿ ಮಧುಮೇಹ ರೋಗಿಗಳಿಗೆ, ಕ್ಯಾನ್ಸರ್, ಉಬ್ಬಸ ತಡೆಗೆ, ಗಂಟಲ ನೋವು, ಕಿಡ್ನಿ ಸಮಸ್ಯೆ ನಿವಾರಣೆಗೆ, ಪಚನಕ್ರಿಯೆ ವೃದ್ಧಿಗೆ ಪರಿಣಾಮಕಾರಿಯಾಗಿದೆ. ಜ್ಯೂಸ್, ಔಷಧ ತಯಾರಿಕೆಗೂ ನೇರಳೆ ಹಣ್ಣನ್ನು ಬಳಸಲಾಗುತ್ತಿದೆ. ಹಣ್ಣಿನ ಬೀಜದ ಪುಡಿ ಸೇವನೆಯಿಂದ ಮೂತ್ರ ತೊಂದರೆ ನಿವಾರಣೆಯಾಗುತ್ತದೆ. ಮೂಲವ್ಯಾಧಿ ಮತ್ತು ಪಿತ್ತಜನಕಾಂಗ ತೊಂದರೆ ನಿವಾರಿಸುತ್ತದೆ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿದೆ.
ಹಂಗಾಮಿನಲ್ಲಿ ಬೆಳೆಯುವ ಎಲ್ಲ ಹಣ್ಣುಗಳನ್ನು ತಿನ್ನಬೇಕು ಎಂದು ಹಿರಿಯರು ಹೇಳುತ್ತಾರೆ. ನೀರಲ ಹಣ್ಣಿಗೆ ಔಷಧ ಗುಣವಿದ್ದು, ವರ್ಷಕ್ಕೊಮ್ಮೆ ಸಿಗುವ ಈ ಹಣ್ಣನ್ನು ಮಕ್ಕಳು ಸೇರಿ ಎಲ್ಲರೂ ತಿನ್ನಬೇಕು. ದುಬಾರಿಯಾದರೂ ಪ್ರತಿವರ್ಷ ಈ ಹಣ್ಣಿನ ಸೀಜನ್ ಮುಗಿಯುವವರೆಗೆ ಮೂರ್ನಾಲ್ಕು ಬಾರಿಯಾದರೂ ಈ ಹಣ್ಣನ್ನು ಖರೀದಿಸುತ್ತೇವೆ.| ಶೋಭಾ ಅಮರಪ್ಪನವರ ಗ್ರಾಹಕಿ, ಲಕ್ಷ್ಮೇಶ್ವರ