

ನುಗ್ಗೇಹಳ್ಳಿ: ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕನಸಿನ ಯೋಜನೆ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿಯ ಹೊನ್ನಮ್ಮನಕೆರೆ ತುಂಬಿಸುವ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಶನಿವಾರ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.ಬಾಗೂರು ಹೋಬಳಿಯ ಕಾರೇಹಳ್ಳಿ ಸಮೀಪದ ಜಾಬ್ ಗಟ್ಟ ಹೇಮಾವತಿ ನಾಲೆ ಬಳಿಯಿರುವ ಜಾಕ್‌ವೆಲ್‌ನ ಪಂಪ ಹೌಸ್‌ನಲ್ಲಿ ನೀರೆತ್ತುವ ಮೋಟಾರ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಮಾತನಾಡಿದರು.
ತಮ್ಮ ಹುಟ್ಟೂರಿನ ರೈತರಿಗೆ ಅನುಕೂಲ ಆಗಲೆಂದು ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಮಾಡಿ ಸಂತೇಶಿವರ ಏತ ನೀರಾವರಿ ಯೋಜನೆಗೆ ಸುಮಾರು 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ನಾನು ಕ್ಷೇತ್ರದ ಶಾಸಕರಾಗಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೆಚ್ಚಿನ ಶ್ರಮವಹಿಸಿ ಯೋಜನೆ ಪೂರ್ಣಗೊಳಿಸಿ ಪ್ರಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದರು.
ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುವಂತೆ ಎಸ್.ಎಲ್.ಭೈರಪ್ಪ ಅವರಿಗೆ ಮನವಿ ಮಾಡಿದ್ದೆ. ಆದರೆ ಈ ಯೋಜನೆ ಮೂಲಕ ಕೆರೆ ಸಂಪೂರ್ಣ ತುಂಬಿದ ನಂತರ ಗ್ರಾಮಕ್ಕೆ ಆಗಮಿಸಿ ಗಂಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸುವುದಾಗಿ ತಿಳಿಸಿದ್ದಾರೆ ಎಂದರು.
ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿಯ ಹೊನ್ನಮ್ಮನಕೆರೆ ತುಂಬಿಸುವ ಯೋಜನೆ ರೂಪಿಸಲು ಹೇಮಾವತಿಯ ನಾಲೆಯ ಕಾರೇಹಳ್ಳಿ ಭಾಗದ ಹಲವು ಕಡೆ ಸರ್ವೇ ಕಾರ್ಯ ನಡೆಸಲಾಯಿತು. ಆದರೆ ಜಾಬ್ ಗಟ್ಟ ಬಳಿ ನಾಗಮಂಗಲ ವ್ಯಾಪ್ತಿಯ ಹೇಮಾವತಿ ನಾಲೆ ಪಕ್ಕದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಿ ಪೈಪ್‌ಲೈನ್ ಮೂಲಕ ಕೆರೆಗಳಿಗೆ ನಿರುಹರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಇಡೀ ಯೋಜನೆಯ ಫಲ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಸಲ್ಲಬೇಕು. ಅವರ ಪರಿಶ್ರಮದಿಂದಲೇ ಈ ಯೋಜನೆಗೆ 25 ಕೋಟಿ ರೂ. ಅನುದಾನ ದೊರಕಿತು. ಈ ಭಾಗದ ಹಾಗೂ ತಾಲೂಕಿನ ಜನತೆ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಯೋಜನೆಯ ಜತೆಗೆ ನವಿಲೆ ಏತ ನೀರಾವರಿ ಯೋಜನೆ ಮೂಲಕವೂ ಸಂತೇ ಶಿವರ ಹಾಗೂ ಅಗ್ರಹಾರ ಬೆಳಗುಲಿಯ ಹೊನ್ನಮ್ಮನಕೆರೆ ನೀರು ಹರಿಸಲಾಗುತ್ತದೆ. ಈಗಾಗಲೇ ಚಿಕ್ಕೋನಹಳ್ಳಿ ಕೆರೆಗೆ ನೀರು ಬಿಡಲಾಗಿದ್ದು, ಸದ್ಯದಲ್ಲೇ ಕೆರೆ ತುಂಬಲಿದೆ. ನಂತರ ಈ ಭಾಗದ ನಾಲೆಗೆ ನೀರು ಹರಿಸಲಾಗುತ್ತದೆ ಎಂದರು.
15 ದಿನದಲ್ಲಿ ಹಿರೀಸಾವೆ ಕೆರೆಗೆ ನೀರು: ಹಿರೀಸಾವೆ ಏತ ನೀರಾವರಿ ಯೋಜನೆ ಮೂಲಕ ಈಗಾಗಲೇ ವ್ಯಾಪ್ತಿಯ ಅನೇಕ ಕೆರೆಗಳು ತುಂಬಿದ್ದು, ಮುಂದಿನ 15 ದಿನಗಳೊಳಗೆ ಹಿರೀಸಾವೆ ಕೆರೆಗೆ ನೀರು ಬಿಡಲಾಗುತ್ತದೆ. ಪುರಾಣ ಪ್ರಸಿದ್ಧ ಕಬ್ಬಳಿ ಗ್ರಾಮದ ಕೆರೆಗೆ ಈಗಾಗಲೇ ತುರುವೇಕೆರೆ ವ್ಯಾಪ್ತಿಯ ಹೇಮಾವತಿ ನಾಲೆಯಿಂದ ನೀರು ಹರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದಿಡಗ ಭಾಗದ ಕೆರೆಗಳಿಗೆ ನೀರು ಹರಿಸಲು ಯೋಜನೆ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ವೆಂಕಟರಮಣ ರೆಡ್ಡಿ, ಕಾರೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತಾ ನಾಗೇಂದ್ರ, ಉಪಾಧ್ಯಕ್ಷ ಕೆ. ಎ.ಸತೀಶ್, ಕೃಷಿ ಪತ್ತಿನ ಅಧ್ಯಕ್ಷ ರೇವಣ್ಣ, ಮುಖಂಡರಾದ ಅಣತಿ ವೆಂಕಟೇಶ್, ಎನ್.ಬಿ.ನಾಗರಾಜ್, ದುಗ್ಗೇನಹಳ್ಳಿ ವೀರೇಶ್, ಅಗ್ರಹಾರ ಬೆಳಗುಲಿ ಲೋಕೇಶ್, ಜಯಲಿಂಗೇಗೌಡ, ಎಚ್.ಎಂ.ನಟರಾಜ್, ಉದ್ಯಮಿ ಚಿಪ್ಪಿನ ಚಂದ್ರು, ಪುಟ್ಟಸ್ವಾಮಿ, ಬಿ.ಸಿ.ದೊರೆ, ತೋಟಿ ನಾಗರಾಜ್, ಗಂಜಿಗೆರೆ ಕೆಂಪೇಗೌಡ, ನಟೇಶ್, ಹೊಸೂರು ಚಂದ್ರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಪರಮೇಶ್, ಉಮಯಿನ್, ರವಿಶಂಕರ್, ಕುಳ್ಳೇಗೌಡ, ನ್ಯಾಯ ಬೆಲೆ ಅಂಗಡಿ ಜಗದೀಶ್, ಇಟ್ಟಿಗೆ ನಾಗರಾಜ್, ಸಿ.ಜೆ. ಕುಮಾರ್, ಕಿರಣ್, ಲೋಹಿತ್, ಜಾಬ್‌ಗಟ್ಟ ದಿನೇಶ್ ಇತರರು ಇದ್ದರು.
ಕೈಕೊಟ್ಟ ಯಂತ್ರ, ಹಠಬಿಡದ ಶಾಸಕರು: ಶನಿವಾರ ಮಧ್ಯಾಹ್ನ ಜಾಕ್‌ವೆಲ್‌ನಲ್ಲಿ ನೀರೆತ್ತುವ ಮೋಟಾರ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡುವ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯಂತ್ರದ ತಾಂತ್ರಿಕ ದೋಷದ ಕುರಿತು ಶಾಸಕ ಸಿ.ಎನ್.ಬಾಲಕೃಷ್ಣ ಅವರಿಗೆ ಗುತ್ತಿಗೆದಾರರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ತಡ ಮಾಡದೆ ಯಂತ್ರದ ವಿದ್ಯುತ್ ಉಪಕರಣವನ್ನು ಬೆಂಗಳೂರಿನಿಂದ ತರಿಸುವ ಮೂಲಕ ಸಂಜೆ ಸ್ಥಳದಲ್ಲೇ ಇದ್ದು ಶಾಸಕರು ಚಾಲನೆ ನೀಡಿದರು.