

ಚಿತ್ರದುರ್ಗ: ರಾಜ್ಯದ ಲಕ್ಷಾಂತರ ರೈತರ ಜೀವನಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ ಕ್ರಮ ಖಂಡಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಸೋಮವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಸೇನೆಯ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಸೆ. 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ನಮ್ಮ ಸಂಘಟನೆ ಕೂಡ ಬೆಂಬಲಿಸುತ್ತಿದೆ. ಆದ್ದರಿಂದ ಘಟಕದಿಂದ ಬಸ್‌ಗಳ ಸಂಚಾರ ಆರಂಭಿಸಬಾರದು. ಅಲ್ಲಿಗೆ ಸಂಚರಿಸುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಟೋಲ್ಗಳಲ್ಲಿ ತಡೆಯಲಾಗುವುದು ಎಂದು ತಿಳಿಸಿದರು.
ಬಂದ್‌ನಿಂದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ದುಡಿಯುವ ವರ್ಗಕ್ಕೆ ತೊಂದರೆ ಆಗಲಿದ್ದು, ಇದಕ್ಕೆ ಸರ್ಕಾರ ಅವಕಾಶ ನೀಡದೆಯೇ ಕಾವೇರಿ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ವಿಶೇಷ ಗಮನ ಹರಿಸಬೇಕು ಎಂದು ಕೋರಿದರು.
ಸೇನೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ವಿಶ್ವನಾರಾಯಣ ಮೂರ್ತಿ, ಜಗದೀಶ್, ಮಣಿಕಂಠ, ಅಖಿಲೇಶ್, ಮಹಮದ್‌ರಫಿ, ರತ್ನಮ್ಮ, ಪ್ರದೀಪ್, ಆರ್.ಅವಿನಾಶ್, ಅಭಿಷೇಕ್, ನಾಗರಾಜ್ ಇದ್ದರು.