ನೀರು ಸೋರಿಕೆಯಿಂದ ಕುಕ್ಕರಹಳ್ಳಿಕೆರೆಗೆ ಅಪಾಯ ಇಲ್ಲ: ತಜ್ಞರ ಅಭಿಪ್ರಾಯ

RAM_4722
Published on

ಮೈಸೂರು: ಹೆಚ್ಚುವರಿ ನೀರಿನಿಂದ ಕುಕ್ಕರಹಳ್ಳಿಕೆರೆಗೆ ಯಾವುದೇ ಹಾನಿಯಾಗದಂತೆ ರಾಕ್‌ಟೋ ಮತ್ತು ಹೆಡ್ ರೆಗ್ಯುಲೇಟರ್ ಅನ್ನು ಹೇಗೆ ಮಾಡಬೇಕು ಎಂಬ ಕುರಿತು ವಾರದೊಳಗೆ ವರದಿ ನೀಡುವುದಾಗಿ ಕಾವೇರಿ ನೀರಾವರಿ ನಿಗಮದ ವಿನ್ಯಾಸ (ಡಿಸೈನ್ ವಿಂಗ್) ತಂಡದ ಇಂಜಿನಿಯರ್‌ಗಳು ತಿಳಿಸಿದ್ದಾರೆ.
ನಿಗಮದ ಡಿಸೈನ್ ವಿಂಗ್‌ನ ತಾಂತ್ರಿಕ ಸಲಹೆಗಾರ ಎಚ್.ಕೆ.ಸಂಪತ್ ಕುಮಾರ್ ನೇತೃತ್ವದ ತಂಡದ ಸದಸ್ಯರು ಸೋಮವಾರ ಕುಕ್ಕರಹಳ್ಳಿಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ನೀರು ಸೋರಿಕೆಯಿಂದ ಕೆರೆಗೆ ಯಾವುದೇ ಅಪಾಯವಿಲ್ಲ. ಆದರೆ ಕೆರೆಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ವ್ಯವಸ್ಥಿತವಾಗಿ ರಾಕ್‌ಟೋಗಳನ್ನು ಮತ್ತು ಹೆಡ್ ರೆಗ್ಯುಲೇಟರ್ ಅಳವಡಿಸಬೇಕು ಎನ್ನುವ ಸಲಹೆ ನೀಡಿದರು.
ಕೆರೆಯ ಏರಿಯಲ್ಲಿ ಎಲ್ಲಿ ನೀರು ಜಿನುಗುತ್ತದೆಯೋ ಅಲ್ಲಿ ನೀರು ಬಸಿದು ಹೋಗಲು ಅನುಕೂಲವಾಗುಂತೆ ಕಾಂಕ್ರೀಟ್ ಬಳಸದೆ ಕಲ್ಲಿನಲ್ಲಿಯೇ ರಾಕ್‌ಟೋ ನಿರ್ಮಿಸಬೇಕು. ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಗೆ ಹೋಗುವಂತೆ ಮಾಡಲು ಈಗಿರುವ ಕೊಂಟ(ಸ್ಲೂಸೈ ಗೇಟ್) ನ ಬದಲಾಗಿ ಹೆಡ್ ರೆಗ್ಯುಲೇಟರ್ ಅನ್ನು ಅಳವಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಕೆರೆಯ ಹೆಚ್ಚುವರಿ ನೀರು ಹೊರ ಹೋಗಲು ಅನುಕೂಲವಾಗುತ್ತದೆ. ಆದರೆ ಹೆಚ್ಚುವರಿ ನೀರು ಬಿಟ್ಟಾಗ ದೋಬಿಘಾಟ್, ಔಷಧ ಸಸ್ಯವನ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಡಿಸೈನ್‌ವಿಂಗ್‌ನ ಎಇಇಗಳಾದ ಎಂ.ಎನ್.ಚಂದ್ರಶೇಖರ್, ಗೋವರ್ಧನ್, ಸೋಮಶೇಖರ್, ಮೈಸೂರು ವಿವಿಯ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರತಾಪ್, ಎಇಇ ಶಿವಲಿಂಗಪ್ರಸಾದ್, ಕುಕ್ಕರಹಳ್ಳಿಕೆರೆ ಉಳಿಸಿ ಹೋರಾಟ ಸಮಿತಿಯ ಪ್ರೊ.ಕೆ.ಎಂ.ಜಯರಾಮಯ್ಯ ಇತರರು ಇದ್ದರು.
ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಇಂಜಿನಿಯರ್‌ಗಳ ತಂಡ ಶನಿವಾರ ಪರಿಶೀಲನೆ ನಡೆಸಿ, ಮಣ್ಣಿನ ಪರೀಕ್ಷೆಗೆ ಮಾದರಿ ಸಂಗ್ರಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net