ನೀರು ಸರಬರಾಜು ಸಹಾಯಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

27-GPT-1
Published on

ಗುಂಡ್ಲುಪೇಟೆ: ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಪುರಸಭೆ ಕಾಯಂಗೊಳಿಸುವಂತೆ ಒತ್ತಾಯಿಸಿ ನೀರು ಸರಬರಾಜು ಸಹಾಯಕರು ಬುಧವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ನೌಕರರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ನಮ್ಮ ಸೇವೆ ಸಕ್ರಮಗೊಳಿಸುವುದಕ್ಕಾಗಿ ಕಳೆದ ಒಂದು ದಶಕದಿಂದ ಅವಿರತವಾಗಿ ಪ್ರಯತ್ನಪಟ್ಟರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯ ಈ ಬಗ್ಗೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ. ಜಿಲ್ಲಾಧಿಕಾರಿ ಸಹ ಕಳೆದ 9 ತಿಂಗಳ ಹಿಂದೆಯೇ ಇಲಾಖಾ ಸೇವೆಯಲ್ಲಿ ಸಕ್ರಮಗೊಳಿಸುವಂತೆ ಆದೇಶ ನೀಡಿದ್ದಾರೆ, ಪುರಸಭೆ ಅಧಿಕಾರಿಗಳು ಮಾತ್ರ ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಶಾಸಕ ಗಣೇಶ್‌ಪ್ರಸಾದ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಹಾಗೂ ಯೋಜನಾ ನಿರ್ದೇಶಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ.

ಈಗಾಗಲೇ ಹಲವಾರು ನೌಕರರು ಅನಾರೋಗ್ಯಕ್ಕೆ ಈಡಾಗಿದ್ದಾರೆ ಮತ್ತು ನಿವೃತ್ತಿ ಅಂಚಿನಲ್ಲಿದ್ದಾರೆ. ನಮ್ಮ ಬಹುಪಾಲು ಉದ್ಯೋಗ ಜೀವನವನ್ನು ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಾ ಕಳೆದಿದ್ದು, ಈಗ ನಿವೃತ್ತರಾಗುವ ಸಂದರ್ಭದಲ್ಲಿ ನಮಗೆ ಪರಿಪೂರ್ಣ ಉದ್ಯೋಗ ಜೀವನ ನಡೆಸುವಂತಾಗಲು ತಮ್ಮನ್ನು ಕಾಯಂಗೊಳಿಸಬೇಕು, ಅಲ್ಲಿಯವರೆಗೆ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

ನೌಕರರಾದ ಉಪಾಧ್ಯಕ್ಷ ಶಿವಶಂಕರಮೂರ್ತಿ, ಕಾರ್ಯದರ್ಶಿ ಶ್ರೀಧರಮೂರ್ತಿ, ಪುಟ್ಟಸ್ವಾಮಿ, ಮಹದೇವಸ್ವಾಮಿ, ನಂದೀಶ್, ಶಂಕರ, ನಾಗಮಲ್ಲಪ್ಪ, ರಾಜು ಈಶ್ವರ್, ಅಲಿಯುಲ್ಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net