

ರಾಮನಗರ: ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರಗಳು ವಿಲವಾಗಿರುವುದನ್ನು ಖಂಡಿಸಿ ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರದಿಂದಲೇ ಜೆಡಿಎಸ್ ಭರ್ಜರಿ ಚಾಲನೆ ನೀಡಿದೆ.
ಕನಕಪುರದ ಕಾವೇರಿ ಮತ್ತು ಅರ್ಕಾವತಿ ನದಿ ಸಂಗಮದ ಸ್ಥಳದಲ್ಲಿ ಶನಿವಾರ ಕಾರ್ಯಕರ್ತರ ಜೈಕಾರದೊಂದಿಗೆ, ಕಲಾತಂಡಗಳು, ಪುರೋಹಿತರ ಮಂತ್ರ ೂಷಗಳ ನಡುವೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ನದಿಯಿಂದ ಬಿಂದಿಗೆಯಲ್ಲಿ ನೀರು ಸಂಗ್ರಹಿಸಿ ಜಲಧಾರೆ ಗಂಗಾರಥದ ಕಳಸಕ್ಕೆ ತುಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುವ ಮೂಲಕ ಜಲಧಾರೆ ರಥಕ್ಕೆ ಅದ್ದೂರಿತನ ತಂದುಕೊಟ್ಟರು. ಗಂಗಾರಥವು ಹೆಗ್ಗನೂರು, ಉಯ್ಯಂಬಳ್ಳಿ, ದೊಡ್ಡಆಲಹಳ್ಳಿ, ಚಿಕ್ಕ ಆಲಹಳ್ಳಿ, ಸಾತನೂರು ಮಾರ್ಗವಾಗಿ ಸಂಚರಿಸಿ ಹೊನಗಾನಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿತು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಪ್ರತಿ ಬಾರಿ ರೈತರ ಹೆಸರಲ್ಲಿ ಅಧಿಕಾರ ಹಿಡಿಯುವ ಪಕ್ಷಗಳು ರೈತರು ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಬದ್ಧತೆ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರ ಹಿತದೃಷ್ಟಿಯಿಂದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಬೇಕು, ಬಜೆಟ್ನಲ್ಲಿ ಹೆಚ್ಚುವರಿ ಹಣ ಮೀಸಲಿಡಬೇಕು, ಕುಡಿಯುವ ನೀರಿಗೂ ಆದ್ಯತೆ ನೀಡಬೇಕು ಎಂದು ಜೆಡಿಎಸ್ ಈ ಹೋರಾಟ ಹಮ್ಮಿಕೊಂಡಿದೆ ಎಂದರು.
ಚುನಾವಣೆ ಯಾತ್ರೆಯಲ್ಲ: ಇದು ಚುನಾವಣೆಗಾಗಿ ನಡೆಸುತ್ತಿರುವ ಯಾತ್ರೆಯಲ್ಲ. ನೀರಾವರಿ ಯೋಜನೆಗೆ 5.5 ಲಕ್ಷ ಕೋಟಿ ಹಣ ಬೇಕು. ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ, ಎಲ್ಲ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಈ ಹಿಂದೆ ರೈತರ ಸಾಲಮನ್ನಾ ಮಾಡುತ್ತೇನೆ ಎಂದಿದ್ದ ಮಾತನ್ನು ಈಡೇರಿಸಿದ್ದಾರೆ. ಈಗಲೂ ನೀರಾವರಿ ಯೋಜನೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ, ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿವೆ. ರಾಜ್ಯಕ್ಕೆ ಯಾವುದೇ ಅನ್ಯಾಯವಾದರೂ, ದೇವೇಗೌಡರು ಮುಂಚೂಣಿಯಲ್ಲಿ ಹೋರಾಟಕ್ಕೆ ನಿಲ್ಲುತ್ತಿದ್ದರು. ಪ್ರಧಾನಿಯಾಗಿದ್ದ ವೇಳೆ ದೇವೇಗೌಡರ ಆಡಳಿತ ಇಂದಿಗೂ ಮರೆಯುವಂತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ ಎಂದರು.
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ದಿನನಿತ್ಯ ಕುಡಿಯಲು ಆರೂವರೆ ಸಾವಿರ ಎಂಎಲ್ ನೀರಿನ ಅಗತ್ಯವಿದೆ. ಆದರೆ ದೊರೆಯುತ್ತಿರುವುದು ಎರಡೂವರೆ ಸಾವಿರ ಮಾತ್ರ. ಕಾವೇರಿ ನದಿ ನಮ್ಮ ರಾಜ್ಯದಲ್ಲೇ ಹುಟ್ಟಿ, ಹರಿಯುತ್ತಿದ್ದರೂ ಸ್ಥಳಿಯರೇ ಕುಡಿಯುವ ನೀರಿನ ಅಭಾವ ಎದುರಿಸಬೇಕಿದೆ. ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರು ತಡೆದು ಬಳಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯಲು ಹಾಗೂ ಕೃಷಿಗೆ ನೀರು ಇಲ್ಲದಂತಹ ಪರಿಸ್ಥಿತಿ ಎದುರಾಗಲಿದೆ. ನೀರಾವರಿ ಅಣೆಕಟ್ಟುಗಳ ನಿಮಾರ್ಣಕ್ಕೆ ರಾಜ್ಯದ ಜನ ಸಿಡಿದೆದ್ದು ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಅನಿತಾ ಜತೆಗೆ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ರಮೇಶ್ಗೌಡ ಮುಂತಾದವರು ಸಾಥ್ ನೀಡಿದರು.
ಎಲ್ಲರಿಗೂ ನೀರು&ಎಚ್ಡಿಕೆ ಕನಸು: ಶಾಸಕ ಅನ್ನದಾನಿ ಮಾತನಾಡಿ, ವಾಟಾಳ್ ನಾಗರಾಜ್ ಸೇರಿ ಎಲ್ಲರೂ ಹೋರಾಟ ಮಾಡುತ್ತಾರೆ. ಆದರೆ, ಕುಮಾರಸ್ವಾಮಿ ಅವರ ಪರಿಕಲ್ಪನೆಯೇವಿಭಿನ್ನ. ಎಲ್ಲರಿಗೂ ಸಮಾನ ನೀರಿನ ಹಕ್ಕು ಸಿಗಬೇಕು ಎಂಬುದೇ ಎಚ್ಡಿಕೆ ಕನಸು. ಕಾಂಗ್ರೆಸ್ನ ಪಾದಯಾತ್ರೆಗೂ ಮುನ್ನವೇ ನಮ್ಮ ಜಲಧಾರೆ ಶುರುವಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿತ್ತು. ಇದನ್ನು ಕಾಂಗ್ರೆಸ್ ಹೈಜಾಕ್ ಮಾಡಿತು ಎಂದು ದೂರಿದರು. ಕಾವೇರಿ ನದಿ ನಮ್ಮ ರಾಜ್ಯದಲ್ಲಿ ಹುಟ್ಟಿದರೂ, ತೃಪ್ತಿದಾಯಕ ನೀರು ಸಿಗುತ್ತಿಲ್ಲ. ನ್ಯಾಯಯುತ ನೀರಿಗಾಗಿ ಹೋರಾಟ ನಡೆಯುತ್ತಿದೆ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.
ಇಂದು ವಿವಿಧೆಡೆ ನೀರು ಸಂಗ್ರಹ: ಜಲಧಾರೆಯ ಗಂಗಾರಥಗಳಿಗೆ ಸಂಗಮದಲ್ಲಿ ಶನಿವಾರ ಕಾವೇರಿ ನೀರು ಸಂಗ್ರಹ ಮಾಡಲಾಯಿತು. ಭಾನುವಾರವೂ ಜಿಲ್ಲೆ ವಿವಿಧ ಕಡೆಗಳಲ್ಲಿ ನೀರಿನ ಸಂಗ್ರಹ ನಡೆಯಲಿದೆ. ಹಾರೋಬೆಲೆ ಅಣೆಕಟ್ಟು, ಮುತ್ತತ್ತಿಯ ಕಾವೇರಿ ನದಿ, ಇಗ್ಗಲೂರು ಅಣೆಕಟ್ಟು, ಚನ್ನಪಟ್ಟಣದ ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ವೈ.ಜಿ. ಗುಡ್ಡ ಜಲಾಶಯ, ತಿಪ್ಪಗೊಂಡನಹಳ್ಳಿ ಜಲಾಶಯದಿಂದಲೂ ನೀರು ಸಂಗ್ರಹಿಸಿ, ಬೆಂಗಳೂರು ಕಡೆಗೆ ಗಂಗಾರಥತೆರಳಲಿದೆ.
ದೊಡ್ಡ ಆಲಹಳ್ಳಿಯಲ್ಲಿ ಅಬ್ಬರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದ ಸಂಗಮದಲ್ಲಿಯೇ ಪವಿತ್ರ ಜಲವನ್ನು ಸಂಗ್ರಹ ಮಾಡುವ ಮೂಲಕ ಜಲಧಾರೆಗೆ ಚಾಲನೆ ನೀಡಿದ್ದ ಅನಿತಾ, ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ತವರು ದೊಡ್ಡಆಲಹಳ್ಳಿಯಲ್ಲಿಯೇ ಸಾರ್ವಜನಿಕ ಸಭೆ ನಡೆಸುವ ಮೂಲಕ ಟಾಂಗ್ ನೀಡಿದರು.
ಸಭೆಯಲ್ಲಿ ಕುಮಾರಸ್ವಾಮಿ ಅವರ ಸಾಧನೆ ಹಾಗೂ ಭವಿಷ್ಯದ ಕನಸುಗಳನ್ನು ಅನಾವರಣ ಮಾಡುವ ಮೂಲಕ ಮತ ಬೇಟೆ ಮಾಡಿದರು. ಇದು ಜೆಡಿಎಸ್ ಕಾರ್ಯಕರ್ತರು ಅದರಲ್ಲೂ ಕನಕಪುರದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿತು.