

ಕೆ.ಆರ್.ಸಾಗರ: ಕಾವೇರಿ ನೀರು ನಿರ್ವಹಣಾ ಸಮಿತಿಗೆ ಇಲ್ಲಿನ ಜಲಾಶಯಗಳ ವಸ್ತುಸ್ಥಿತಿ ಅರ್ಥವಾಗಿಲ್ಲ. ಮತ್ತೆ ನೀರು ಬಿಡಬೇಕು ಎಂಬ ಆದೇಶ ನಿರೀಕ್ಷೆ ಮಾಡಿರಲಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಹೇಳಿದರು.
ಬುಧವಾರ ಬೆಳಗ್ಗೆ ಕೆ.ಆರ್.ಸಾಗರ ಅಣೆಕಟ್ಟೆಯ ಹಿನ್ನೀರಿಗೆ ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಸಮಿತಿಗೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ತಮಿಳುನಾಡು ಕೃಷಿಗೆ ನೀರು ಕೇಳುತ್ತಿದೆ. ಇಲ್ಲಿನ ರೈತರಿಗೆ ಬೆಳೆ ಬೆಳೆಯದಂತೆ ಸರ್ಕಾರ ಸೂಚನೆ ನೀಡಿದೆ. ಸಮಿತಿಯು ಕಾವೇರಿ ಕೊಳ್ಳದ ನಾಲ್ಕು ಅಣೆಕಟ್ಟೆಗಳಲ್ಲಿನ ನೀರಿನ ಸಂಗ್ರಹವನ್ನು ಪರಿಶೀಲಿಸಿದ ಬಳಿಕ ತೀರ್ಮಾನ ಮಾಡಬೇಕು. ಇಲ್ಲಿನ ವಾಸ್ತವ ಸ್ಥಿತಿ ನೋಡದೆ ಒಂದು ರಾಜ್ಯದ ಕಡೆ ಆದೇಶ ನೀಡುವುದು ಎಷ್ಟು ಸರಿ? ಯಾವ ಅಧಾರದ ಮೇಲೆ ನೀರು ಬಿಡುಗಡೆ ಆದೇಶ ನೀಡಿದೆ ಎಂಬುದೇ ಪ್ರಶ್ನೆಯಾಗಿದೆ ಎಂದರು.
ಕೆ.ಆರ್.ಸಾಗರ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ನೋಡಿ ಆದೇಶದ ಬಗ್ಗೆ ಕೋಪ ಬರುತ್ತಿದೆ. ಅವರಿಗೆ ಇಲ್ಲಿನ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ನೀರು ಬಿಡಲು ನಮ್ಮಲ್ಲಿ ಅಗತ್ಯ ಸಂಗ್ರಹವಿಲ್ಲ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದೆ. ಮಿತಿಮೀರಿ ನೀರು ಬಿಟ್ಟರೆ ಪಕ್ಷಾತೀತವಾಗಿ ವಿವಿಧ ಸಂಘಟನೆಗಳೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ. ಇದಕ್ಕೆ ಕಾವೇರಿ ಕೊಳ್ಳದ ಎಲ್ಲ ಜನರು ಕೈಜೋಡಿಸಬೇಕು ಎಂದು ಹೇಳಿದರು.