

ತೂಬಗೆರೆ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಿರುಮಗೊಂಡಹಳ್ಳಿಯ ಜನರು ಸೋಮವಾರ ಹಾಡೋನಹಳ್ಳಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಪರಿಹಾರಕ್ಕೆ ಪಂಚಾಯಿತಿಗೆ ಹಲವು ತಿಂಗಳಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಕೃಷಿ ಕೊಳವೆಬಾವಿಗಳಿಂದ ನೀರು ತರಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಜಿಪಂ ಸಿಇಒ ರವಿಕುವಾರ್ ಅಥವಾ ತಾಪಂ ಇಒ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಜತೆಗೆ, ಖಾಲಿ ಕೊಡ ಪ್ರದರ್ಶಿಸಿ ಆಡಳಿತ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಮನುಷ್ಯರೇ, ನಮಗೂ ನೀರು ಕೊಡಿ, ಇಲ್ಲದಿದ್ದರೆ ಪಂಚಾಯಿತಿ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಾಪಂ ಇಒ ಮುರುಡಯ್ಯ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಅಧಿಕಾರಿ ಮುರುಡಯ್ಯ, ನೀರಿನ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಕೊಳವೆಬಾವಿಗೆ ಹೊಸ ಪಂಪ್ ಮೋಟಾರ್ ಅಳವಡಿಸಿ ನೀರು ಪೂರೈಸುವ ವ್ಯವಸ್ಥೆ ವಾಡುತ್ತೇವೆ. ಅದರಲ್ಲೂ ನೀರು ಬರದಿದ್ದರೆ ಹೊಸ ಕೊಳವೆಬಾವಿ ಕೊರೆಯಲು ವ್ಯವಸ್ಥೆ ವಾಡುವುದಾಗಿ ಭರವಸೆ ನೀಡಿದರು. ತಿರುಮಗೊಂಡಹಳ್ಳಿ ಗ್ರಾಮಕ್ಕೂ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು.