ನೀರು ಪೂರೈಕೆಯಲ್ಲಿ ವಿಳಂಬವಾದರೆ ಕ್ರಮ

h19-abbayya meeting
Published on

ಹುಬ್ಬಳ್ಳಿ: ನೀರು ಪೂರೈಕೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಪ್ರತಿದಿನ ದೂರುಗಳು ಬರುತ್ತಿವೆ. ಸಾರ್ವಜನಿಕರ ದೂರುಗಳನ್ನು ಹಗುರವಾಗಿ ಪರಿಗಣಿಸಿ ನೀರು ಸರಬರಾಜುವಿನಲ್ಲಿ ವಿಳಂಬ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಾಲಿಕೆ ಕಚೇರಿಯಲ್ಲಿ ಸೋಮವಾರ ಹು-ಧಾ ಪೂರ್ವ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಜಲಮಂಡಳಿ, ಎಲ್ ಆಂಡ್ ಟಿ, ಹೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ ಅವರು, ನನ್ನ ಕ್ಷೇತ್ರದಲ್ಲಿ ನಿಗದಿತ ಸಮಯಕ್ಕೆ ನೀರು ಪೂರೈಕೆ ಮಾಡಲೇಬೇಕು. ಕ್ಷೇತ್ರದ ಹಲವೆಡೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಪ್ರತಿದಿನ ದೂರುಗಳು ಕೇಳಿ ಬರುತ್ತಿವೆ. ಆದರೆ, ಅಧಿಕಾರಿಗಳು ಮಾತ್ರ ತುರ್ತು ಕ್ರಮಕ್ಕೆ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕಲುಷಿತ ನೀರು ಪೂರೈಕೆ ವಿರುದ್ಧ ಜನರು ಕ್ರಮಿನಲ್ ಮೊಕದ್ದಮೆ ಹಾಕುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಪ್ರತಿ 7 ದಿನಕ್ಕೊಮ್ಮೆ ಪೂರೈಕೆ ಆಗಬೇಕಿದ್ದ ನೀರು, ಕೆಲವೆಡೆ 11ದಿನಗಳಾವಾದರೂ ಪೂರೈಕೆ ಆಗುತ್ತಿಲ್ಲ. ಅನೇಕ ಕಡೆ ಕೊಳವೆ ಬಾವಿ ಕೂಡ ದುರಸ್ತಿಯಾಗದೇ ಜನರು ಪರದಾಡುತ್ತಿದ್ದಾರೆ. ಗುತ್ತಿಗೆ ಕಂಪನಿಯಾದ ಎಲ್ ಆಂಡ್ ಟಿ ಅವರ ಸಹಾಯವಾಣಿ ಸಂಖ್ಯೆ ಬಂದಾಗಿದೆಯೇ? ಎಲ್ಲ ಕರೆಗಳು ನಮಗೆ ಬರುತ್ತಿವೆ ಎಂದು ಎಲ್ ಆಂಡ್ ಟಿ ಅಧಿಕಾರಿಗಳ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net