

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಧಾರವಾಡದ ಧಾರವಾಡದ ಡಿಪೋ ವೃತ್ತದ ಬಳಿ ಸಾರ್ವಜನಿಕರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಏಕಾಏಕಿ ರಸ್ತೆಗಿಳಿದ ಮಹಿಳೆಯರು ಕೆಲಕಾಲ ರಸ್ತೆ ತಡೆ ನಡೆಸಿದರು. ಖಾಲಿ ಕೊಡಗಳನ್ನು ಹಿಡಿದು ಪಾಲಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುರುಘಾಮಠ ಮುಖ್ಯ ರಸ್ತೆ, ಅಕ್ಕಪಕ್ಕದ ಓಣಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಪಾಲಿಕೆ ಸದಸ್ಯ ನಿತಿನ್ ಇಂಡಿ ಅವರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರು ಪೂರೈಕೆ ಸಮರ್ಪಕವಾಗಿ ಆಗದಿದ್ದರೆ ಧಾರವಾಡ- ಸವದತ್ತಿ ರಸ್ತೆಯನ್ನು ಸಂಪೂರ್ಣ ತಡೆಯಲಾಗುವುದು ಎಂದು ಪ್ರತಿಭಟನಾನಿರತ ಮಹಿಳೆಯರು ಗಡುವು ನೀಡಿದರು.
ರಸ್ತೆತಡೆಯಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.