ನೀರು ಪೂರೈಕೆಗೆ 65 ಕೋಟಿ ರೂ. ಮಂಜೂರು

03vtp1 KGB MLA Inargation
ಪಟ್ಟಣದ ಸುಂಕದಕಟ್ಟೆ ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ನೆರವೇರಿಸಿದರು. ಪುರಸಭೆ ಅಧ್ಯಕ್ಷೆ ಸುಶ್ಮಿತಾ ಇತರರು ಇದ್ದರು.
Published on

ವಿರಾಜಪೇಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ರಸ್ತೆ ಡಾಂಬರೀಕರಣ, ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ 3.5 ಕೋಟಿ ರೂ. ಅನುದಾನದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ನಗರದ ಜನತೆಗೆ ಕುಡಿಯುವ ನೀರು ಹೆಚ್ಚಿನ ಪೂರೈಕೆಗಾಗಿ 65 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 25 ಲಕ್ಷ ರೂ. ಅನುದಾನದಲ್ಲಿ ಸುಂಕದಕಟ್ಟೆ ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ನಗರದ ಎಲ್ಲ ಮನೆ ಮನೆಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದ್ದರೂ ಮುಂದೆಯೂ ಕುಡಿಯುವ ನೀರಿನ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ 65 ಕೋಟಿ ರೂ. ಮಂಜೂರು ಮಾಡಿದೆ. ಮುಂದಿನ ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಸರ್ಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಕಳಪೆಯಾಗದಂತೆ ಸ್ಥಳೀಯರು ಗಮನ ಹರಿಸಬೇಕು ಹಾಗೂ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಮುಗಿಸುವಂತಾಗಬೇಕು ಎಂದರು. ಪುರಸಭೆ ಅಧ್ಯಕ್ಷೆ ಸುಸ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಇಂಜಿನಿಯರ್ ತೇಜಸ್ವಿನಿ, ಜವಾಹರ್ ಜೋಗಿ, ಪುರಸಭೆ ಸದಸ್ಯರಾದ ಜೂನಾ, ಆಶಾ ಸುಬ್ಬಯ್ಯ, ತಸ್ನಿಂ ಅಕ್ತರ್, ಮಹದೇವ, ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ರಘುನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ, ಮಧು ದೇವಯ್ಯ, ಸಂಪಿ ಪೂಣಚ್ಚ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net