

ಉಳ್ಳಾಗಡ್ಡಿ-ಖಾನಾಪುರ: ಹಿಡಕಲ್ ಜಲಾಶಯದಿಂದ ವಿತರಣಾ ಕಾಲುವೆಗಳಿಗೆ ಬಿಡುವ ನೀರು ಕೊನೆಯ ಹಂತದವರೆಗೆ ತಲುಪುವಂತೆ ನಿಗಾ ವಹಿಸಬೇಕೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಕಾರಿಗಳಿಗೆ ಸೂಚಿಸಿದರು.
ಸಮೀಪದ ಹುನ್ನೂರ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡ್ಯಾಂನಿಂದ ವಿತರಣಾ ಕಾಲುವೆಗಳಿಗೆ ಬಿಡುವ ನೀರನ್ನು ಕೆಲ ರೈತರು ಪಂಪ್‌ಗಳ ಮೂಲಕ ಹೊಲ-ಬಾವಿಗಳಿಗೆ ಒಯ್ಯುತ್ತಿದ್ದಾರೆ. ಇದರಿಂದಾಗಿ ನೀರು ಸೋರಿಕೆಯಾಗಿ ಕೊನೆಯ ಹಂತದವರೆಗೂ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಅಕಾರಿಗಳು ಕಾಲುವೆಗಳನ್ನು ಆಗಾಗ ಪರಿಶೀಲಿಸಬೇಕು ಎಂದರು.
ಬೀಳಗಿ ಶಾಸಕ ಜಿ.ಟಿ.ಪಾಟೀಲ ಮಾತನಾಡಿ, ವಿತರಣೆ ಕಾಲುವೆಗಳಿಗೆ ಪೂರೈಸುವ ನೀರು ಪೋಲಾಗದಂತೆ ತಡೆಯಲು ಪೊಲೀಸರನ್ನು ನೇಮಿಸಬೇಕು. ಕಾಲುವೆಗಳನ್ನು ದುರಸ್ತಿ ಮಾಡಬೇಕು ಎಂದು ಮನವಿ ಮಾಡಿದರು. ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜಸಭಾ ಸದಸ್ಯ ಈರಣ್ಣ ಕಡಾಡಿ, ಜಗದೀಶ ಗುಡಗುಂಟಿ, ಶಾಸಕ ಮಹೇಂದ್ರ ತಮ್ಮಣ್ಣವರ, ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆನ್ನವರ, ಜಿಲ್ಲಾಕಾರಿ ನಿತೇಶ ಪಾಟೀಲ, ನೀರಾವರಿ ಉತ್ತರ ವಲಯದ ಅಭಿಯಂತ ರಾಜೇಶ ಅಮ್ಮಿನಬಾವಿ, ಅೀಕ್ಷಕ ಅಭಿಯಂತರಾದ ಮಹಾವೀರ ಗಣಿ, ಪ್ರಶಾಂತ ಗಿಡ್ಡದಾನಪ್ಪಗೋಳ, ಕಾರ್ಯನಿರ್ವಾಹಕ ಅಭಿಯಂತ ರವಿ ತಾಳೂರ, ಸಹಾಯಕ ಅಭಿಯಂತ ಮಂಜುನಾಥ ಹೊಸಮನಿ, ಅರವಿಂದ ಜಮಖಮಡಿ, ಎಸ್.ಕೆ.ಎಂಟೆತ್ತಿನವರ, ಸುಶಾಂತ ಕುಡಬಾಳೆ, ತಾಂತ್ರಿಕ ಸಹಾಯಕ ಪಿ.ಎಚ್.ಗಂಗನ್ನವರ ಮತ್ತು ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನೀರಾವರಿ ನಿಗಮದ ಅಕಾರಿಗಳು ಇದ್ದರು.
ನಿರ್ಣಯಗಳು: ಆ.9 ರಿಂದ ಆ.14ರ ವರೆಗೆ ಗೋಕಾಕ ವಿಭಾಗದಲ್ಲಿ ಬರುವ ಘಟಪ್ರಭಾ ಬಲದಂಡೆ ಕಾಲುವೆ ವಿತರಣಾ ಕಾಲುವೆಗಳಿಗೆ ನೀರು ಹರಿಸಲಾಗಿದೆ.
2.ಆ.15ರಿಂದ ಆ.21ರ ವರೆಗೆ ಕೌಜಲಗಿ ವಿಭಾಗದಡಿ ಬರುವ ಘಟಪ್ರಭಾ ಬಲದಂಡೆ ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಹಾಗೂ ಆ.22ರಿಂದ ಆ.28ರ ವರೆಗೆ ಬಾಗಲಕೋಟೆ ವಿಭಾಗದಡಿ ವಿತರಣಾ ಕಾಲುವೆಗಳಿಗೆ ನೀರು ಹರಿಸಲು ನಿರ್ಣಯಿಸಲಾಯಿತು, 3.10 ದಿನಗಳ ಬಿಡುವಿನ ನಂತರ ಘಟಪ್ರಭಾ ಬಲದಂಡೆ ಕಾಲುವೆಗಳಿಗೆ 21 ದಿನಗಳವರೆಗೆ ಎರಡು ಬಾರಿ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.