ನೀರಿಲ್ಲದೆ ಬಾಡುತ್ತಿವೆ ಸಸಿಗಳು

5Aratal1
ಅಥಣಿ ತಾಲೂಕಿನ ಅರಟಾಳ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿ ನೆಟ್ಟಿರುವ ಗಿಡಗಳು ನೀರಿಲ್ಲದೆ ಬಾಡುತ್ತಿರುವುದು.
Published on

ಅರಟಾಳ: ಪರಿಸರ ಉಳಿಸಿ-ಬೆಳೆಸಬೇಕು ಎಂಬ ಕೂಗು ದಟ್ಟವಾಗುತ್ತಿರುವ ಈ ದಿನಗಳಲ್ಲಿ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ನೆಟ್ಟ ಸಸಿಗಳು ನೀರಿಲ್ಲದೆ ಒಣಗಿದರೆ ಎಂಥವರಿಗೂ ಸಂಕಟವಾಗುತ್ತದೆ. ಅಥಣಿ ತಾಲೂಕಿನ ಅರಟಾಳ ಗ್ರಾಪಂ ವ್ಯಾಪ್ತಿಯ ಅರಟಾಳ-ಬಾಡಗಿ ಹಾಗೂ ಅರಟಾಳ-ಹಾಲಳ್ಳಿ ರಸ್ತೆ ಬದಿ ವಿವಿಧ ಇಲಾಖೆ ಆಶ್ರಯದಲ್ಲಿ ನೆಟ್ಟ ಸಸಿಗಳು ಸಮರ್ಪಕ ಪಾಲನೆ-ಪೋಷಣೆ ಇಲ್ಲದೆ ಸೊರಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅರಟಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾದಡಿ 2021-22 ಸಾಲಿನಲ್ಲಿ 5,676 ಗುಂಡಿ ತೋಡಿ ಅದರಲ್ಲಿ 5,045 ಸಸಿ ನೆಡಲಾಗಿದೆ. ಗುಂಡಿ ತೋಡಲು ಅಂದಾಜು 16,40, 364 ರೂಪಾಯಿ ವೆಚ್ಚ ಮಾಡಲಾಗಿದೆ. ಆರಂಭದಲ್ಲಿ ಅತ್ಯುತ್ಸಾಹದಿಂದ ನೆಟ್ಟ ಸಸಿಗಳನ್ನು ಇದೀಗ ಯಾರೂ ತಿರುಗಿ ನೋಡುತ್ತಿಲ್ಲ. ನೈಸರ್ಗಿಕ ವಾತಾವರಣದ ಸೃಷ್ಟಿಸುವ ಜತೆಗೆ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನೆಡಲಾದ ಸಸಿಗಳು ಬೇಸಿಗೆಯಲ್ಲಿ ನೀರಿಲ್ಲದೆ ನೆಲಕಚ್ಚುತ್ತಿವೆ. ಸರ್ಕಾರ ಸಸಿ ಬೆಳೆಸಿ, ಪರಿಸರ ಉಳಿಸಿ ಎಂದು ನೂರಾರು ಕಾರ್ಯಕ್ರಮ ಮಾಡುತ್ತದೆ. ಆದರೆ, ಸರ್ಕಾರದ ಕಾರ್ಯಕ್ರಮಗಳು ದಾಖಲೆಗೆ ಮಾತ್ರ ಸೀಮಿತವಾದಂತಾಗಿವೆ ಎನ್ನುವುದು ಸ್ಥಳೀಯರ ಆರೋಪ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಸಸಿ ನೆಡುವ ಕಾರ್ಯಕ್ರಮ ನಡೆಸುತ್ತಿರುವ ಅಧಿಕಾರಿಗಳು ಬಳಿಕ ತಿರುಗಿ ನೋಡುತ್ತಿಲ್ಲ. ನಾಟಿ ಮಾಡಿದ ಸಸಿ ಬೆಳೆದು ಮರವಾಗಬೇಕಾದರೆ ಸರಿಯಾದ ಸಮಯಕ್ಕೆ ನೀರು, ಗೊಬ್ಬರ ಬೇಕು. ನಾಟಿ ಮಾಡಿ ಫೋಟೋ ತಗೆದುಕೊಂಡು ಹೋದರೆ ಸಸಿಗಳು ಬದುಕುವುದಿಲ್ಲ. ಸುಮಾರು 2 ವರ್ಷಗಳಿಂದ ನಾಟಿ ಮಾಡಿದ ಸಸಿಗಳು ನೀರಿನ ಕೊರತೆ ಎದುರಿಸುತ್ತಿವೆ. ಬೇಸಿಗೆಯಲ್ಲಿ ತಿಂಗಳಿಗೊಮ್ಮೆಯಾದರೂ ನೀರು ಹಾಕಿದರೆ ಮಳೆಗಾಲದವರೆಗೂ ಸಸಿಗಳು ಬದುಕುತ್ತವೆ. ಆದರೆ, ಆ ಕೆಲಸಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ. ಅರಣ್ಯ ಪ್ರದೇಶ ವೃದ್ಧಿಗೆ ಕೈಗೊಳ್ಳುವ ಯೋಜನೆಗಳು ಸರಿಯಾಗಿ ಅನುಷ್ಠಾನವಾದರೆ ಸಸ್ಯ ಜಗತ್ತು ಬೆಳೆಯುವುದರ ಜತೆಗೆ ಸರ್ಕಾರದ ಅನುದಾನವೂ ಪೋಲಾಗುವುದು ತಪ್ಪುತ್ತದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

ಅರಟಾಳ-ಹಾಲಳ್ಳಿ ರಸ್ತೆ ಬದಿ ನೆಟ್ಟಿರುವ ಗಿಡಗಳಿಗೆ ನಾಲ್ಕು ದಿನಗಳ ಒಳಗೆ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಉಪ ವಲಯ ಅಧಿಕಾರಿಗಳಳೊಂದಿಗೆ ಮಾತನಾಡುತ್ತೇನೆ.| ಆರ್.ವಿ.ಕಾಂಬಳೆ ಅಥಣಿ ವಲಯ ಅರಣ್ಯಾಧಿಕಾರಿಗ್ರಾಪಂನಿಂದ ಕೇವಲ ಗುಂಡಿ ತೋಡಿ ಕೊಡಲಾಗುತ್ತದೆ. ಗುಂಡಿಯಲ್ಲಿ ಸಸಿ ನೆಡುವುದು, ಸಸಿಗಳಿಗೆ ನೀರು ಒದಗಿಸುವುದು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬೇಸಿಗೆ ಇರುವುದರಿಂದ ಗಿಡಗಳಿಗೆ ನೀರು ಹಾಕಬೇಕು. ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆ.| ಎ.ಜಿ.ಎಡಕೆ ಪಿಡಿಒ, ಅರಟಾಳ

| ಶ್ರೀಶೈಲ ಮಾಳಿ ಅರಟಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net