ನೀರಿನಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ನಾಯಕರು

kalmarudappa
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ
Published on

ಚಿಕ್ಕಮಗಳೂರು: ಜಿಲ್ಲೆಗೆ ಶಾಶ್ವತವಲ್ಲದ ಎತ್ತಿನ ಹೊಳೆ ಯೋಜನೆ ನೀರಿನಲ್ಲಿ ರಾಜಕೀಯ ಮಾಡಲು ಹೊರಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಈ ಯೋಜನೆ ನೀರನ್ನು ಜಿಲ್ಲೆಗೆ ಖಾಯಂಗೊಳಿಸಲು ಪ್ರಯತ್ನಿಸಲಿ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ನೀರನ್ನು ಪ್ರಾಯೋಗಿಕವಾಗಿ ಎತ್ತಿ ನಾಲೆಗಳಿಗೆ ಬಿಡಬೇಕಾಗಿತ್ತು. ಆದರೆ ನಾಲೆಗಳ ಕಾಮಗಾರಿ ನಡೆಯದೆ ಇರುವುದರಿಂದ ಈ ನೀರನ್ನು ಮೂಲ ಯೋಜನೆಯಲ್ಲಿರದ ಬೆಳವಾಡಿ ಮತ್ತು ದೇವನೂರು ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಹೇಳಿದರು.

ಎತ್ತಿನಹೊಳೆ ನೀರನ್ನು ಶಾಶ್ವತವಾಗಿ ಈ ಭಾಗದ ಕೆರೆಗಳಿಗೆ ಹರಿಸಿ ಸಚಿವರು ತಮ್ಮ ಬದ್ಧತೆಯನ್ನು ಪ್ರದರ್ಶನ ಮಾಡಬೇಕೇ ಹೊರತು ಸುಳ್ಳು ಹೇಳಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಬಿಜೆಪಿ ಅಧಿಕಾರದಲ್ಲಿದ್ದಾಗ ಆರಂಭಿಸಿದ ರಣಘಟ್ಟ ಯೋಜನೆ ಅಂತಿಮ ಹಂತದಲ್ಲಿದ್ದು ಅದನ್ನು ಶೀಘ್ರವಾಗಿ ಪೂರ್ಣಗೊಳಿಸಿ ಬದ್ದತೆ ತೋರಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಸಚಿವರು ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಒಂದೇ ಒಂದು ಮನೆ, ನಿವೇಶನ ನೀಡಿಲ್ಲ. ಬಿಪಿಎಲ್ ಕಾರ್ಡ್ ನೀಡಿಲ್ಲ. ನಮೂನೆ ೫೦, ೫೩, ೫೭ರಡಿ ಭೂಮಿ ಹಕ್ಕು ನೀಡಿಲ್ಲ ಎಂದು ನಾವು ಆರೋಪಿಸಿದ್ದೆವು. ಆದರೆ ಸಚಿವರು ಈ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ನಮ್ಮ ಸರ್ಕಾರ ಇದ್ದಾಗ ಭದ್ರಾ ಉಪಕಣಿವೆ ಯೋಜನೆಯಲ್ಲಿ ೧೯೭ ಕೆರೆಗಳಿಗೆ ಅಂದಾಜು ೧,೧೮೧.೮೦ ಕೋಟಿ ರೂ. ಮಂಜೂರು ಮಾಡಿಸಿ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಂಜೂರು ಮಾಡಿಸಿ ಮೊದಲ ಹಂತದ ಕಾಮಗಾರಿ ಮುಗಿದಿದೆ. ೨ನೇ ಹಂತದ ಕಾಮಗಾರಿ ಕುಂಟುತ್ತಾ ಸಾಗಿದೆ. ಅದಕ್ಕೆ ಬೇಗ ಹಣ ಮಂಜೂರು ಮಾಡಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಮತ್ತು ಶಾಸಕರು ಇಚ್ಛಾಶಕ್ತಿ ತೋರಬೇಕು ಎಂದು ಆಗ್ರಹಿಸಿದರು.

ಮೊನ್ನೆ ಬೆಳವಾಡಿ ಕೆರೆಗೆ ಬಾಗಿನ ಬಿಟ್ಟ ಕಾರ್ಯಕ್ರಮ ಜಿಲ್ಲಾಡಳಿತ ಆಯೋಜಿಸಿದ್ದೋ ಅಥವಾ ಕಾಂಗ್ರೆಸ್ ಆಯೋಜಿಸಿದ್ದೋ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಜಿಲ್ಲಾಡಳಿತ ಆಯೋಜಿಸಿದ್ದರೆ ಕಾಂಗ್ರೆಸ್ ಕಾರ್ಯಕತರು ವೇದಿಕೆ ಹಂಚಿಕೊAಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಆಯೋಜಿಸಿದ್ದರೆ ಅಧಿಕಾರಿಗಳು ವೇದಿಕೆ ಮೇಲೆ ಕೂತಿದ್ದೇಕೆ ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿಜಯ್‌ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ದಿನೇಶ್ ಕೋಟೆ, ಸಚಿನ್ ಗೌಡ, ಕೇಶವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net