

ಮೈಸೂರು: ನಾಲೆಯ ಬಳಿ ಬಟ್ಟೆ ಒಗೆಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿಯೂ ನೀರುಪಾಲಾಗಿದ್ದಾರೆ. ಇದರೊಂದಿಗೆ ಪ್ರೀತಿಸಿ ವಿವಾಹವಾದ ಜೋಡಿ ಸಾವಿನಲ್ಲೂ ಒಂದಾಗಿರುವುದು ದುರಂತ.
ಶಿವಕುಮಾರ್(29) ಹಾಗೂ ಕವಿತಾ(25) ಮೃತ ದಂಪತಿ. ಶಾದನಹಳ್ಳಿ ಗ್ರಾಮದ ನಿವಾಸಿಗಳಾದ ಇಬ್ಬರು 5 ತಿಂಗಳ ಹಿಂದೆ ವಿವಾಹವಾಗಿ ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಶುಕ್ರವಾರ ಕೆ.ಆರ್.ಎಸ್.ಬಳಿಯ ವರುಣ ನಾಲೆ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದಾರೆ.
ಪತ್ನಿಯನ್ನು ರಕ್ಷಿಸಲು ಪತಿ ಶಿವಕುಮಾರ್ ನೀರಿಗೆ ಹಾರಿದ್ದಾನೆ. ಆದರೆ, ಇಬ್ಬರೂ ನೀರಿನಿಂದ ಮೇಲೆ ಬಂದಿಲ್ಲ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಕಾರ್ಯಾಚರಣೆ ವೇಳೆ ಕಾಮನಕೆರೆಹುಂಡಿ ಬಳಿಯ ವರುಣ ನಾಲೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.