ನೀರಿನಲ್ಲಿ ಬೈಕ್ ಸಮೇತ ಕೊಚ್ಚಿಹೋದ ವಿದ್ಯಾರ್ಥಿನಿ; ಶವವಾಗಿ ಪತ್ತೆ

ನೀರಿನಲ್ಲಿ ಬೈಕ್ ಸಮೇತ ಕೊಚ್ಚಿಹೋದ ವಿದ್ಯಾರ್ಥಿನಿ; ಶವವಾಗಿ ಪತ್ತೆ
Published on


ಚನ್ನರಾಯಪಟ್ಟಣ : ತಾಲೂಕು ದಡ್ಡಿಹಳ್ಳಿ ಗ್ರಾಮದ ಕೆರೆ ಕೋಡಿಯ ಮೇಲೆ ರಭಸದಿಂದ ಹರಿಯುತಿದ್ದ ನೀರಿನಲ್ಲಿ ತೆರಳುವ ವೇಳೆ ಬೈಕ್ ಸಮೇತ ಕೊಚ್ಚಿಹೋದ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ. ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಹೆಗ್ಗಡಿಗೆರೆ ಗ್ರಾಮದ ರಾಜಭೋವಿ ಎಂಬವರ ಮಗಳು ರಂಜಿತಾ(11) ಮೃತ ವಿದ್ಯಾರ್ಥಿ.


ಘಟನೆಯ ವಿವರ: ಹೆಗ್ಗಡಿಗೆರೆ ನಿವಾಸಿ ರಾಜಭೋವಿಯ ಮಗಳು ರಂಜಿತಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 5 ನೇ ತರಗತಿ ವ್ಯಾಸಾಂಗ ಮಾಡುತಿದ್ದಳು. ಹಿಂದಿನ ದಿನವಾದ ಬುಧವಾರ ಶಾಲೆ ಮುಗಿಸಿಕೊಂಡು ಸಮೀಪದ ಬ್ಯಾಲದಕೆರೆ ಗ್ರಾಮದ ತನ್ನ ಸೋದರ ಮಾವನ ಮನೆಗೆ ತೆರಳಿದ್ದಳು.
ಗುರುವಾರ ಬೆಳಗ್ಗೆ 9.30 ರ ಸುಮಾರಿನಲ್ಲಿ ಶಾಲೆಗೆ ತೆರಳಲೆಂದು ಸೋದರ ಮಾವನ ಮಗ ಯಶ್ವಂತ್ ಜತೆ ಬೈಕ್‌ನಲ್ಲಿ ಹೊರಟಿದ್ದು ದಡ್ಡಿಹಳ್ಳಿ ಮಾರ್ಗವಾಗಿ ಬಂದಿದ್ದಾರೆ. ಬುಧವಾರ ರಾತ್ರಿ ವ್ಯಾಪಕ ಮಳೆ ಸುರಿದ ಪರಿಣಾಮ ದಡ್ಡಿಹಳ್ಳಿ ಗ್ರಾಮದ ಕೆರೆ ಕೋಡಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿತ್ತು.
ಕೋಡಿ ಮೇಲಿನ ರಸ್ತೆಯಲ್ಲಿಯೇ ಹೆಗ್ಗಡಿಹಳ್ಳಿಗೆ ತೆರಳಬೇಕಿದ್ದು ರಭಸವಾಗಿ ಹರಿಯುತ್ತಿರುವ ನೀರಿನಲ್ಲಿಯೇ ಯಶ್ವಂತ್ ತನ್ನ ಬೈಕ್ ಚಲಾಯಿಸಿದ್ದಾನೆ. ಸ್ವಲ್ಪ ದೂರ ಬರುತಿದ್ದಂತೆಯೇ ರಭಸದಲ್ಲಿದ್ದ ನೀರು ಬೈಕ್ ಸಮೇತ ಇಬ್ಬರು ಮಕ್ಕಳನ್ನು ಕೊಚ್ಚಿ ಎಳೆದೊಯ್ದಿದೆ.
ಸಮೀಪದಲ್ಲಿಯೇ ಇದ್ದ ಸಾರ್ವಜನಿಕರು ದೌಡಾಯಿಸಿ ಬಂದು ರಕ್ಷಿಸಲು ಮುಂದಾದರೂ ಯುವಕನನ್ನು ಮಾತ್ರ ದಡಕ್ಕೆ ಎಳೆತರಲಾಗಿದೆ. ಆದರೆ ವಿದ್ಯಾರ್ಥಿನಿ ರಂಜಿತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಇನ್ನು ಬೈಕ್ ನೀರಿನಲ್ಲಿ ಮುಳುಗಿ ಸಿಲುಕಿಕೊಂಡಿದೆ.


ಮುಗಿಲು ಮುಟ್ಟಿದ ಆಕ್ರಂದನ: ವಿಷಯ ತಿಳಿಯುತಿದ್ದಂತೆಯೇ ಹೆಗ್ಗಡಿಹಳ್ಳಿ, ದಡ್ಡಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಜನಸ್ತೋಮವೇ ಹರಿದು ಬಂದಿತ್ತು. ಪಾಲಕರು ಹಾಗೂ ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು.
ವಿಷಯ ತಿಳಿಯುತಿದ್ದಂತೆಯೇ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ರಾಣಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಣತಿ ಆನಂದ್, ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಎಪಿಎಂಸಿ ನಿರ್ದೇಶಕ ಎಂ.ಶಂಕರ್ ಹಾಗೂ ವಿವಿಧ ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.


ಮರಣೊತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ನಂತರ ಅವರ ಜಮೀನಿನಲ್ಲಿ ಸಂಜೆ ಸುಮಾರಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು. ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net