ನೀರಿನ ಸಮಸ್ಯೆ,ಸದ್ಯದಲ್ಲೇ ಬೆಂಗಳೂರಲ್ಲಿ ಉನ್ನತ ಮಟ್ಟದ ಸಭೆ

Published on

ಚಿತ್ರದುರ್ಗ: ಬರಗಾಲ ಜಿಲ್ಲೆ ತತ್ತರಿಸುತ್ತಿದ್ದು,ಬೇಸಿಗೆಯ ಈ ಕಠಿಣ ಸನ್ನಿವೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಪೂರಕವಾಗಿ ಕೆಲಸ ಮಾಡದ ಪಿಡಿಒ,ಇಒ ಹಾಗೂ ತಹಸೀಲ್ದಾರ್‌ಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಬರಪರಿಹಾರ ಕಾರ‌್ಯಕ್ರಮಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು,ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಸಮಸ್ಯೆ ಗಂಭೀರವಾದರೆ ಕೂಡಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬೇಕೆಂದ ಅವರು, ಅಗತ್ಯ ವಿರುವೆಡೆ ತುರ್ತಾಗಿ ಹೊಸದಾಗಿ ಕೊಳವೆಬಾವಿ ಕೊರೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಆರ್‌ಡಿಪಿಆರ್ ಸಚಿವರ ಸಭೆಯಲ್ಲಿ ಕೊನೆಯ ಆಯ್ಕೆಯಾಗಿ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ವಹಿಸಬೇಕೆಂದು ನಿರ್ಣಯಿಸಲಾಗಿದೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಈ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಅಗತ್ಯ ಮಾರ್ಗಸೂಚಿಗೆ ಕೋರಿ ಪ್ರಸ್ತಾ ವನೆ ಸಲ್ಲಿಸಲಾಗುವುದು.
ಸದ್ಯದಲ್ಲೇ ಸಚಿವರಾದ ಪ್ರಿಯಾಂಕ್‌ಖರ್ಗೆ,ಕೃಷ್ಣಬೈರೇಗೌಡ ಅವರೊಂದಿಗೆ ಬೆಂಗಳೂರಲ್ಲಿ ಜಿಲ್ಲೆಯ ಶಾಸಕರು,ಅಧಿಕಾರಿಗಳ ಸಭೆನಡೆಸಲಾಗು ವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ,ಜಿಲ್ಲೆಯಲ್ಲಿ ಸದ್ಯಕ್ಕೆ 367 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಗುರುತಿಸಲಾಗಿದೆ. ಜಿಲ್ಲೆಯ ಆರು ತಾಲೂಕುಗಳಿಗೂ ತಲಾ 40 ಲಕ್ಷ ರೂ.ಅನುದಾನ ಒದಗಿಸಲಾಗಿದೆ. ಗ್ರಾಮೀಣಾ ಭಿವೃದ್ಧಿ ಇಲಾಖೆಯಿಂದಲೂ ಪ್ರತಿ ತಾಲೂಕಿಗೆ 25 ಲಕ್ಷ ರೂ.ಹಂಚಿಕೆಯಾಗಿದೆ. ಪಿಡಿ ಖಾತೆಯಲ್ಲಿ 9 ಕೋಟಿ ರೂ.ಗಳಿದ್ದು,ಬರ ನಿರ್ವಹಣೆಗೆ ಹಣದ ತೊಂದರೆ ಇಲ್ಲ.
ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಟೆಂಡರ್ ಕರೆಯಲಾಗಿದೆ. ನೀರಿನ ಸಮಸ್ಯೆಗೆ ಸ್ಪಂದಿಸಲು ಡಿಸಿ ಕಚೇರಿಯಲ್ಲಿ 24/7 ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ಪಿಡಿಒಗಳು ಅನುದಾನವಿಲ್ಲವೆಂದು ಸಬೂಬು ಹೇಳಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಡಿಸಿ ಹೇಳಿದರು. ವಿಪತ್ತು ಪರಿಹಾರ ನಿಧಿಯನ್ನು ಗ್ರಾ. ಪಂ.ಗಳಿಗೆ ನೇರ ಬಿಡುಗಡೆ ಮಾಡಲಾಗದು. ಟ್ಯಾಂಕರ್ ನೀರು ಪೂರೈಕೆ ಬಿಲ್‌ನ್ನು ತಹಸೀಲ್ದಾರ್ ಅಧ್ಯಕ್ಷತೆ ಸಮಿತಿಗೆ ಸಲ್ಲಿಸಬೇಕೆಂದರು.
ಜಾನುವಾರುಗಳಿಗೆ ಮೇವು
ತುರುವನೂರು,ಚೌಳೂರು ಗೇಟ್ ಹಾಗೂ ಅಜ್ಜನಗುಡಿ ಗ್ರಾಮಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಈವರೆಗೆ 11564 ಜಾನುವಾರುಗಳಿಗೆ 67.550 ಟನ್ ಮೇವು ಪೂರೈಸಲಾಗಿದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಆರ್‌ಡಿಪಿಆರ್‌ನಿಂದ ಪ್ರತಿ ತಾಲೂಕಿಗೆ 25 ಲಕ್ಷ ರೂ.ಗಳನ್ನು ಹೊಸ ಕೊಳವೆ ಬಾವಿ ಕೊರೆಸಲು ಕಾಯ್ದಿರಿಸಬೇಕು.ಬೇಡಿಕೆಯಾನುಸಾರ ಗೋಶಾಲೆಗಳನ್ನು ಪ್ರಾರಂಭಿಸಬೇಕು. ಶೇ.50 ಭತ್ತದ,ಶೇ.25 ರಾಗಿಯ ಹುಲ್ಲು ಹಾಗೂ ಶೇ.25 ಜೋಳದ ದಂಟನ್ನು ಪೂರೈಸಬೇಕೆಂದರು.
ಒಬ್ಬರೇ ಜಿಯಾಲಾಜಿಸ್ಟ್
ಸದ್ಯಕ್ಕೆ ಜಿಲ್ಲೆಯಲ್ಲಿ ಹೊರಗುತ್ತಿಗೆಯಡಿ ಜಿಯಾಲಿಸಿಸ್ಟ್ ಒಬ್ಬರಿದ್ದಾರೆ. ಆದ್ದರಿಂದ ಪ್ರತಿ ಎರಡು ತಾಲೂಕುಗಳಿಗೆ ಒಬ್ಬರಂತೆ,ಮೂವರು ಜಿಯಾ ಲಿಜಿಸ್ಟ್‌ಗಳ ನೇಮಕ ಮಾಡಿಕೊಳ್ಳ ಬೇಕೆಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಶೇ.50 ಅನುದಾನ
ಗ್ರಾಪಂಗಳು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ.50ನ್ನು ಕುಡಿವ ನೀರಿಗೆ ಖರ್ಚು ಮಾಡಬೇಕಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸಭೆ ಗಮನ ಸೆಳೆದರು. ಈ ಅನುದಾನದ ದುರ್ಬಳಕೆ ತಪ್ಪಿಸಲು ನಿಯಾನುಸಾರ ಕಟ್ಟು ನಿಟ್ಟಾಗಿ ಪಿಡಿಒಗಳು ಹಣವನ್ನು ಖರ್ಚು ಮಾಡಬೇಕೆಂದ ಅವರು,ಮಳೆ ಉತ್ತಮವಾಗಿದ್ದಾಗ ಆಗುತ್ತಿದ್ದ ನೀರಿನ ಅಪವ್ಯಯ ಪ್ರಸ್ತಾಪಿಸಿದ ಚಂದ್ರಪ್ಪ, ನೀರಿನ ಸದ್ಬಳಕೆ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ವೇಳೆ ಜೆಜೆಎಂ ಕಾಮಗಾರಿ ಕುರಿತು ಚರ್ಚಿಸಲಾಯಿತು.
ಬೆಳೆನಷ್ಟ ಪರಿಹಾರ ಪಾವತಿ
ಜಿಲ್ಲೆಯ 1,38,226 ರೈತರಿಗೆ 26.86 ಕೋಟಿ ರೂ.ಬೆಳೆನಷ್ಟ ಪರಿಹಾರವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾಹಿತಿ ನೀಡಿದರು. ಈ ಹಿಂದೆ ಜಿಲ್ಲೆಯಲ್ಲಿ ಆಗಿರುವ ಬೆಳೆ ನಷ್ಟ ಪರಿಹಾರ,ಬೆಳೆ ವಿಮೆ ಪರಿಹಾರ ದುರ್ಬಳಕೆಗೆ ಸಂಬಂಧಿಸಿ ದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ವಿಳಂಬವಾಗಿ ಎಂದು ರಘುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಭಿತ್ತಿಪತ್ರ ಬಿಡುಗಡೆ
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರಲ್ಲಿ ಫೆ.27ರಿಂದ 2 ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದ ಭಿತ್ತಿಪತ್ರವನ್ನು ಸಚಿವರು ಬಿಡುಗಡೆ ಮಾಡಿದರು. ಎಸಿ ಎಂ.ಕಾರ್ತೀಕ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಮೇಟಿಪಾಟೀಲ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net