ನೀರಿನ ಸಮಸ್ಯೆ ಬಗೆಹರಿಸಿ: ಶಾಸಕ ರಾಮದಾಸ್

19 (3)
ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮೈಸೂರುಮಹಾನಗರಪಾಲಿಕೆ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ಸುನಂದ ಪಾಲನೇತ್ರ, ಅನ್ವರ್‌ಬೇಗ್, ಲಕ್ಷ್ಮಿಕಾಂತ್ ರೆಡ್ಡಿ, ಶಿವಕುಮಾರ್ ಇನ್ನಿತರರಿದ್ದರು.
Published on

ಮೈಸೂರು: ಕೆ.ಆರ್.ಕ್ಷೇತ್ರದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಕುರಿತು ಶಾಸಕ ಎಸ್.ಎ.ರಾಮದಾಸ್ ಗುರುವಾರ ಪಾಲಿಕೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಕಬಿನಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಒಂದು ವಾರದಿಂದ ನೀರಿನ ಸಮಸ್ಯೆ ಆಗಿದೆ. ಇದರಿಂದ ಜನತೆ ಬಳಲುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನೂತನ ಯಂತ್ರೋಪಕರಣವನ್ನು ಒಂದು ವಾರದೊಳಗಾಗಿ ಅಳವಡಿಸಬೇಕು ಎಂದು ಶಾಸಕರು ತಿಳಿಸಿದರು.

ಕಬಿನಿಯಿಂದ 2ನೇ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, 2 ತಿಂಗಳೊಳಗಾಗಿ ಈ ಕೆಲಸವೂ ಮುಗಿಯಲಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಕೆ.ಆರ್.ಕ್ಷೇತ್ರಾದ್ಯಂತ ಆ.15ರೊಳಗಾಗಿ ಸಂಪೂರ್ಣವಾಗಿ ಬೋರ್‌ವೆಲ್ ನೀರನ್ನು ನಿಲ್ಲಿಸಿ, ಕಬಿನಿ ಕುಡಿಯುವ ನೀರನ್ನು ಪೂರೈಸಬೇಕು. ಬೋರ್‌ವೆಲ್ ನೀರನ್ನು ಉದ್ಯಾನಗಳಿಗೆ ಬಳಸಬೇಕು ಎಂದರು.

ನೂತನವಾಗಿ ಅಳವಡಿಸಿರುವ ಮೀಟರ್‌ಗಳಿಂದ ಅತಿ ಹೆಚ್ಚಾಗಿ ನೀರಿನ ಬಿಲ್ ಬರುತ್ತಿದೆ ಎಂದು ಪಾಲಿಕೆ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಮತ್ತು ಸಮಸ್ಯೆ ಮರುಕಳಿಸದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ನೀರಿನ ಕರದ ಮೇಲಿನ ಬಡ್ಡಿ ಮನ್ನಾ ಮಾಡಿ, ಬಡ್ಡಿ ರಹಿತವಾಗಿ ನೀರಿನ ಬಿಲ್ ಪಾವತಿಸಲು ಅನೂಕೂಲ ಮಾಡಿಕೊಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದರು.

ಮೇಯರ್ ಸುನಂದ ಪಾಲನೇತ್ರ, ಉಪ ಮೇಯರ್ ಅನ್ವರ್‌ಬೇಗ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಸದಸ್ಯರಾದ ಶಿವಕುಮಾರ್, ಬಿ.ವಿ.ಮಂಜುನಾಥ್, ಗೀತಾ ಯೋಗನಂದ್, ಚಂಪಕ, ಪಲ್ಲವಿ ಬೇಗಂ, ಶೋಭಾ ಸುನೀಲ್ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net