ನೀರಿನ ಸಮಸ್ಯೆ ತುರ್ತಾಗಿ ನಿವಾರಿಸಿ

Water problem, Taluk Incharge Officer, Shankar Gowda Somanala, Muddebihala,
ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಉಸ್ತುವಾರಿ ಅಧಿಕಾರಿ ಶಂಕರಗೌಡ ಸೋಮನಾಳ ಅಧಿಕಾರಿಗಳ ಸಭೆ ನಡೆಸಿದರು. ಡಾ.ಸತೀಶ ತಿವಾರಿ, ಸಂಗಮೇಶ ಹೊಲ್ದೂರ, ವಿಜಯಕುಮಾರ ಉತ್ನಾಳ, ಡಾ.ಶಿವಾನಂದ ಮೇಟಿ, ಎ.ಎಚ್.ಮದಭಾವಿ, ಆರ್.ಕೆ.ರಾಠೋಡ, ಶಿವರಾಜ ರಾಠೋಡ, ಯು.ಬಿ.ಧರಿಕಾರ ಇತರರಿದ್ದರು.
Published on

ಮುದ್ದೇಬಿಹಾಳ: ಬರಗಾಲ, ಬೇಸಿಗೆಯ ಗಂಭೀರತೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಅಧಿಕಾರಿಗಳು, ಪಿಡಿಒಗಳು ಮೊಬೈಲ್ ಬಂದ್ ಮಾಡುವುದು ಮಾಡಬಾರದು ಎಂದು ತಾಲೂಕು ಉಸ್ತುವಾರಿ ಅಧಿಕಾರಿ, ವಿಜಯಪುರ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಬರ ಪರಿಸ್ಥಿತಿ ಮತ್ತು ಬೇಸಿಗೆ ಕುಡಿಯುವ ನೀರು ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು. ಶಾಲಾ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ಜತೆಗೆ ಶುದ್ಧ ನೀರು ಒದಗಿಸಬೇಕು. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಬಾಲ ಕಾರ್ಮಿಕ ಸಮಸ್ಯೆ ಹೆಚ್ಚಾಗುವವುದನ್ನು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳು ಈಗಿನಿಂದಲೇ ಪ್ರಯತ್ನ ನಡೆಸಬೇಕು. ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ 110 ಕೆವಿ ಸ್ಟೇಷನ್ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕಿನಲ್ಲಿ ಭ್ರೂಣಹತ್ಯೆ ಪ್ರಕರಣ ನಡೆದಿರುವುದು ವಿಷಾದದ ಸಂಗತಿಯಾಗಿದೆ. ಸರ್ಕಾರಿ ಸೇರಿ ಎಲ್ಲ ಆಸ್ಪತ್ರೆಗಳ ಎದುರು ಭ್ರೂಣಹತ್ಯೆ ಅಪರಾಧ ಕುರಿತ ಮಾಹಿತಿ ಇರುವ ಬೋರ್ಡ್ ಅಳವಡಿಸಬೇಕು. ಆಸ್ಪತ್ರೆ, ಕ್ಲಿನಿಕ್ ಅಥವಾ ಖಾಸಗಿ ಸ್ಥಳದಲ್ಲಿ ಅಕ್ರಮ ಗರ್ಭಪಾತ, ಭ್ರೂಣಹತ್ಯೆ ನಡೆಯುತ್ತಿದ್ದರೂ ಆ ಕುರಿತು ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಆಸ್ಪತ್ರೆಗಳಲ್ಲಿ ಔಷಧ ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು. ಇ ಹಾಸ್ಪಿಟಲ್ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಬೇಕು. ಸಾಂಕ್ರಾಮಿಕ ರೋಗ, ಮಂಗನಬಾವು ತಡೆಗಟ್ಟಲು ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕು ಎಂದರು.

ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸಲು ಈಗಲೇ ಜಲಮೂಲ ಗುರುತಿಸಿ ಮಾಲೀಕರೊಂದಿಗೆ ಒಪ್ಪಂದ ಪತ್ರ ಮಾಡಿಕೊಳ್ಳಬೇಕು. ಪಂಚಾಯಿತಿವಾರು ಪಟ್ಟಿ ಮಾಡಿಕೊಡಬೇಕು. ಟಾಸ್‌‌ಕೆೆರ್ಸ್ ಸಭೆ ಕಡ್ಡಾಯವಾಗಿ ನಡೆಸಬೇಕು. ಕೆರೆ ತುಂಬಲು ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ಕೃಷಿಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ, ಸಾರಿಗೆ ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ ಮಾತನಾಡಿದರು. ಇನ್ನುಳಿದಂತೆ ಕೃಷಿ, ತೋಟಗಾರಿಕೆ, ಹೆಸ್ಕಾಂ, ಸಾರಿಗೆ, ಬಿಸಿಎಂ ಮತ್ತಿತರ ಇಲಾಖೆಗಳ ಮೇಲೆ ಸಂಕ್ಷಿಪ್ತ ಚರ್ಚೆ ನಡೆಯಿತು.

ಚರ್ಚೆ ವೇಳೆ ನಿದ್ದೆ: ಸಭೆಯಲ್ಲಿ ಪಾಲ್ಗೊಂಡಿದ್ದ ಪಿಆರ್‌ಇಡಿ ಸಬ್ ಡಿವಿಜನ್ ಎಇಇ ಶಿವರಾಜ ನಾಯಕು ಅವರು ಚರ್ಚೆ ನಡೆಯುತ್ತಿರುವಾಗಲೇ ಗಡದ್ದಾಗಿ ನಿದ್ದೆ ಹೊಡೆದರು. ಪಕ್ಕದಲ್ಲಿದ್ದ ಅಧಿಕಾರಿ ತಿವಿದಾಗ ಕಣ್ಣೊರೆಸುತ್ತ ಎಚ್ಚರಾದರೂ, ನಿದ್ದೆಗಣ್ಣಲ್ಲೇ ಸಭೆಯಲ್ಲಿ ಪಾಲ್ಗೊಂಡರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ- ಬಾಲಾಜಿ ಸಕ್ಕರೆ ಕಾರ್ಖಾನೆ ಉದ್ಯೋಗಿ ಶೋಭಾ ಶಳ್ಳಗಿ ಸಭೆಯಲ್ಲಿ ಪ್ರಾರಂಭದಿಂದ ಕೊನೆವರೆಗೂ ಭಾಗಿಯಾಗಿದ್ದು ಹಲವರ ಅಚ್ಚರಿಗೆ ಕಾರಣವಾಯಿತು. ಪಲ್ಸ್ ಪೋಲಿಯೋ ಸಭೆಯಲ್ಲಿ ಪಾಲ್ಗೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಶಳ್ಳಗಿ ಅವರನ್ನು ಕರೆಸಿದ್ದಾರೆ ಎಂದು ಶಿರಸ್ತೆದಾರ ಎಂ.ಎ.ಬಾಗೇವಾಡಿ ಮಾಧ್ಯಮದವರಿಗೆ ಸಮಜಾಯಿಷಿ ನೀಡಿದರು. ಸಭೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಅಧಿಕಾರಿಗಳು ಇಲ್ಲದಿರುವ ಕೊರತೆ ಎದ್ದು ಕಂಡಿತು.

ಚವನಭಾವಿ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಕಳೆದ ಸಭೆಯಲ್ಲಿ ತಿಳಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ನೀರಿನ ಸಮಸ್ಯೆ ಮತ್ತು ಟಕ್ಕಳಕಿ, ಇಂಗಳಗಿ, ನೇಬಗೇರಿ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು.
ಶಂಕರಗೌಡ ಸೋಮನಾಳ, ತಾಲೂಕು ಉಸ್ತುವಾರಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net