

ಚಿಕ್ಕಬಳ್ಳಾಪುರ: ಜಲಮೂಲಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಕುಂಟೆ ನಿರ್ಮಿಸಿ, ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.ತಾಲೂಕಿನ ಸಬ್ಬೇನಹಳ್ಳಿ ಮತ್ತು ಈತಮಾಕಾಲಹಳ್ಳಿ ರಸ್ತೆಯ ಸಮೀಪ ನರೇಗಾ ಯೋಜನೆಯಡಿ ನಿರ್ಮಿಸಿರುವ ಸರ್ಕಾರಿ ಗೋ ಕುಂಟೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ದಕ್ಷ ಅಧಿಕಾರಿಗಳಿಂದ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿಸಬಹುದು. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 700 ಕಿ.ಮೀಗೂ ಹೆಚ್ಚು ಉದ್ದದ ಕಾಲುವೆ ನಿರ್ಮಿಸುತ್ತಿರುವುದು ಶ್ಲಾಘನೀಯ. ಹಾಗೆಯೇ ಪ್ರತಿ ಗ್ರಾಪಂನಲ್ಲಿ ಗೋಕುಂಟೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇದು ನೀರು ಸಂರಕ್ಷಣೆಯ ಜತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿ ಎಂದರು.
ಸ್ಥಳೀಯ ಜನ ಪ್ರತಿನಿಧಿಗಳು ಆಯಾ ಭಾಗದಲ್ಲಿನ ಅಭಿವೃದ್ಧಿ ಕೆಲಸ, ಸಮಸ್ಯೆಗಳ ಬಗ್ಗೆ ಸಮರ್ಪಕವಾಗಿ ಗಮನಹರಿಸಬೇಕು. ಸರ್ಕಾರದ ಸವಲತ್ತಿನಲ್ಲಿ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡಂತೆ ಒಂದು ತರಬೇತಿ ಕಾರ್ಯಕ್ರಮ ಕೈಗೊಂಡು ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ನರೇಗಾ ಯೋಜನೆಯಡಿ ಈ ವರ್ಷ ಜಿಲ್ಲೆಯಲ್ಲಿ 350 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಯೋಜನೆಯ ಸಹಕಾರಿಯಾಗಿದೆ. ಜಲಮೂಲಗಳು ಮತ್ತು ಅಂತರ್ಜಲ ಅಭಿವೃದ್ಧಿಯಿಂದ ಜನರ ಬದುಕು ಹಸನಾಗುತ್ತದೆ. ಇದನ್ನರಿತು ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಪ್ರಾಕೃತಿಕ ಆಸ್ತಿಯ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಹಾಹಾಕಾರದ ಪರಿಸ್ಥಿತಿಯಲ್ಲಿ ನೀರಿನ ಸಂರಕ್ಷಣೆಯು ಬಹಳ ಮುಖ್ಯವಾದುದು. ಈ ನಿಟ್ಟಿನಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 64 ಲಕ್ಷ ಮಾನವ ದಿನಗೂಲಿಯನ್ನು ಸೃಜಿಸಿದ್ದು, ಸರ್ಕಾರಿ ಕುಂಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಆರ್.ಲತಾ, ತಹಸೀಲ್ದಾರ್ ಗಣಪತಿ ಶಾಸಿ, ತಾಪಂ ಇಒ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಗಾಯತ್ರಮ್ಮ, ಉಪಾಧ್ಯಕ್ಷ ಮಂಚನಬಲೆ ಶ್ರೀಧರ್, ಪಿಡಿಒ ಪವಿತ್ರಾ ಮತ್ತಿತರರು ಇದ್ದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ತಾಲೂಕಿನ ಮಂಚನಬಲೆ ಗ್ರಾಪಂ ವ್ಯಾಪ್ತಿಯ ಕಾಮಾಶೆಟ್ಟಿಹಳ್ಳಿಯಲ್ಲಿ 16.5 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡ ಕಾಮಗಾರಿ, ಲೋಕೋಪಯೋಗಿ ಇಲಾಖೆ ಟಿಎಸ್‌ಪಿ ಅನುದಾನದಲ್ಲಿ ಕೈಗೊಂಡಿರುವ 6 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಸಬ್ಬೇನಹಳ್ಳಿ-ಈತಮಾಕಾಹಳ್ಳಿ ರಸ್ತೆಯ ಸಮೀಪ ನರೇಗಾ ಯೋಜನೆಯಡಿಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಸರ್ಕಾರಿ ಕೆಂಪನಕುಂಟೆ ಉದ್ಘಾಟಿಸಿದರು. ನಗರದ ಕಂದವಾರ ಬಾಗಿಲು ಸಮೀಪ ಏಕೋ ಥೀಮ್ ಪಾರ್ಕ್ ಮತ್ತು ಸಂಗೀತ ಕಾರಂಜಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.