ನೀರಿನ ಶುದ್ಧೀಕರಣ ಘಟಕಗಳ ಪರಿಶೀಲಿಸಿ

06 YERRISWAMY 05
Published on

ಬಳ್ಳಾರಿ : ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಶುದ್ಧೀಕರಣಗಳ ಘಟಕಗಳನ್ನು ಪಿಡಿಒ ಗಳು ಪರಿಶೀಲಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಗಿರಿಜಾಶಂಕರ ಸೂಚಿಸಿದರು.
ಇಲ್ಲಿನ ಜಿಪಂ ನಜೀರ್ ಸಭಾಂಗಣದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕ್ಷೇತ್ರ ಪರೀಕ್ಷಾ ಕಿಟ್ ಮತ್ತು ಎಚ್2ಎಸ್ ವಿಐಎಎಲ್‌ಎಸ್ ಸಾಧನಗಳ ಬಳಸಿ ನೀರಿನ ಪರೀಕ್ಷೆ ಕೈಗೊಳ್ಳುವ ವಿಷಯವಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಲುಷಿತ ನೀರು ಸೇವನೆಯಿಂದ ಜನ ಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ನೀರಿನ ಮೂಲಗಳನ್ನು ಪರಿಶೀಲನೆ ಕೈಗೊಂಡು ಪರೀಕ್ಷೆಗೆ ಒಳಪಡಿಸಬೇಕು. ಮಳೆಗಾಲ ಆರಂಭವಾಗಿದ್ದು, ಕಲುಷಿತ ನೀರು ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳು ಬೀರುವ ಸಾಧ್ಯತೆಗಳಿರುವುದರಿಂದ, ಪಿಡಿಒಗಳು ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿ, ಕಲುಷಿತವಾಗಿದ್ದಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದ್ದರೆ ದುರಸ್ತಿ ಮಾಡಿಸುವ ಸಂದರ್ಭದಲ್ಲಿ ಸುರಕ್ಷಿತವಾಗಿ ಕೆಲಸ ನಿರ್ವಹಿಸಬೇಕು. ಶುದ್ಧ ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಈ ವೇಳೆ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಮತ್ತು ಕ್ಷೇತ್ರ ಪರೀಕ್ಷಾ ಕಿಟ್ ಉಪಯೋಗಿಸಿ ನೀರು ಪರೀಕ್ಷೆ ಮಾಡುವ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ನೀರು ಪರೀಕ್ಷೆ ಪ್ರಯೋಗಾಲಯದ ಸಿಬ್ಬಂದಿ, ನೀರು ಪರೀಕ್ಷೆ ಮಾಡಿಸಿ ಮಾಹಿತಿ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net