

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ನಮ್ಮ ಜೀವನದಲ್ಲಿ ಅತ್ಯಗತ್ಯ ವಸ್ತು. ಅದನ್ನು ಅನಗತ್ಯವಾಗಿ ಪೋಲು ಮಾಡದೆ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ನಿರ್ದೇಶಕ ರಾಜೇಶ ಅಮ್ಮಿನಭಾವಿ ಅಭಿಪ್ರಾಯಪಟ್ಟರು.
ನಗರದ ವಾಲ್ಮಿ ಹಾಗೂ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ಎಸ್‌ಡಿಎಂ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ನೀರಾವರಿ ನಿರ್ವಹಣೆ ಮತ್ತು ಜಲ ಸಂಗ್ರಹಾಗಾರಗಳ ರಕ್ಷಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗವು ಇಂಜಿನಿಯರಿಂಗ್ ವಿಭಾಗಗಳೆಲ್ಲದರ ತಾಯಿ ಇದ್ದಂತೆ. ಹೀಗಾಗಿ ಈ ವಿಭಾಗದ ಮಹತ್ವ ಅರಿತು ವಿದ್ಯಾರ್ಥಿಗಳು ವೃತ್ತಿಪರವಾಗಿ ಜೀವನದಲ್ಲಿ ಬೆಳೆದು ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಮುಂದಾಗಬೇಕು. ಜೀವನದಲ್ಲಿ ಸಾಕಷ್ಟು ಶ್ರಮಪಟ್ಟು ದುಡಿದರೆ ಉನ್ನತ ಹುದ್ದೆ ಗಳಿಸುವ ಜತೆಗೆ ಸಮಾಜದಲ್ಲಿ ಗೌರವ ಸಹ ಪಡೆಯಬಹುದು ಎಂದರು.
ಡಾ. ಶರದ ಜೋಶಿ ಮಾತನಾಡಿ, ಈ ಮೊದಲು ಹವಾಮಾನ ತಂತ್ರಜ್ಞಾನ ಅಷ್ಟಾಗಿ ಬೆಳೆದಿರಲಿಲ್ಲ. ಆದರೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಾವು ಕೇವಲ ಈ ವರ್ಷದ ಮಳೆ- ಬೆಳೆ ಸ್ಥಿತಿ ಗತಿಯನ್ನಲ್ಲದೇ ಮುಂದಿನ ವರ್ಷಗಳಲ್ಲಿ ಇರಬಹುದಾದ ಹವಾಮಾನ ಪರಿಸ್ಥಿತಿ ಬಗ್ಗೆಯೂ ಅರಿಯಬಹುದಾಗಿದೆ. ಹೀಗಾಗಿ ಇಂತಹ ಸೌಲಭ್ಯ ಬಳಸಿಕೊಂಡು ಅದಕ್ಕೆ ತಕ್ಕಂತೆ ಕಾರ್ಯಕ್ರಮ ಹಾಕಿಕೊಂಡು ಮುಂದಿನ ದಿನಗಳಲ್ಲಿ ಬರಬಹುದಾಗ ಮಳೆ, ಲಭ್ಯವಾಗಬಹುದಾದ ನೀರಿನ ಸಂಗ್ರಹ ಆಧರಿಸಿ ಯಾವ ಬಗೆಯ ಕೃಷಿ ಮಾಡಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ ಎಂದರು.
ಮಲಪ್ರಭಾ ನೀರಾವರಿ ಯೋಜನೆ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಮಾತನಾಡಿ, ಮೊದಲು ನೀರಾವರಿ ಪ್ರದೇಶದಲ್ಲಿ ಒಣ ಬೇಸಾಯದತ್ತ ರೈತರು ಒಲವು ತೋರುತ್ತಿದ್ದರು. ಆದರೆ ಈಗ ಎಲ್ಲರೂ ಕಬ್ಬು, ಹೆಚ್ಚು ನೀರು ಬೇಡುವ ವಾಣಿಜ್ಯ ಬೆಳೆಗಳತ್ತ ಒಲವು ಬೆಳೆಸಿಕೊಂಡ ಪರಿಣಾಮ ನೀರಿನ ಸಮರ್ಪಕ ನಿರ್ವಹಣೆ ಕಷ್ಟಕವಾಗಿದೆ. ರೈತರು ಇದನ್ನು ಅರ್ಥ ಮಾಡಿಕೊಂಡು ಲಭ್ಯ ಇರುವ ನೀರಿಗೆ ಅನುಗುಣವಾಗಿ ಬೆಳೆ ಬೆಳೆಯಬೇಕು ಎಂದರು.
ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಗೋಪಿನಾಥ ಅಧ್ಯಕ್ಷತೆ ವಹಿಸಿದ್ದರು.
ಸುವರ್ಣಾ ದೊಡ್ಡಮನಿ, ಡಾ. ಬಿ. ವೆಂಕಟೇಶ, ಎನ್. ಹನುಮಂತಪ್ಪ, ಶೈಲಜಾ ಹೊಸಮಠ, ಡಿ.ಎಸ್. ಮದ್ಲಿ, ಆರ್. ಕುಮಾರಸ್ವಾಮಿ, ಶ್ರೀಧರ ತುಂಗಳದ, ಇತರರು ಇದ್ದರು.