ನೀರಿನ ಮಿತ ಬಳಕೆ ಮಾಡಿ

5-SanduruP1
????????????
Published on

ಸಂಡೂರು: ವಾರ್ಡ್‌ನಲ್ಲಿ ಆರು ಆರು ಬೋರ್‌ವೆಲ್‌ಗಳಿದ್ದು, ನೀರನ್ನು ಮಿತವಾಗಿ ಬಳಸಬೇಕು. ಮನೆಗಳ ಮುಂದೆ ವಾಹನಗಳನ್ನು ತೊಳೆಯಬಾರದು. ಮುಂದಿನ ದಿನಗಳಲ್ಲಿ ನೀರಿಗೆ ಸಂಬಂಧಿಸಿದಂತೆ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಪುರಸಭೆ ಸದಸ್ಯ ಎಲ್.ಎಚ್.ಶಿವಕುಮಾರ್ ಹೇಳಿದರು.

ಪಟ್ಟಣದ 18ನೇ ವಾರ್ಡ್‌ನಲ್ಲಿ ‘ನಮಸ್ತೆ ಸಂಡೂರು, ಪುರಸಭೆ ನಡೆ ಜನರ ಕಡೆ’ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಬೀದಿ ದೀಪಗಳು ಹಗಲಲ್ಲೇ ಉರಿಯುತ್ತವೆ. ಸ್ವಿಚ್ ಆಫ್ ಮಾಡಬೇಕು. ವೆಂಕಟೇಶ್ವರ ದೇವಸ್ಥಾನದ ಬಳಿ ಹೈಮಾಸ್ಟ್ ದೀಪ ಹಾಕಬೇಕು. ಆರ್‌ಒ ಪ್ಲಾಂಟ್ ದುರಸ್ತಿ ಮಾಡಿಸಬೇಕು. ಜನರ ಆಸ್ತಿಗೆ ಸಂಬಂಧಿಸಿದ ಫಾರ್ಮ್ 3 ತೆಗೆದುಕೊಂಡು ವಾರ್ಡ್‌ಗಳಲ್ಲಿ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ಬಿ.ವಿನಯಕುಮಾರ ಗೌಡ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ 10,997 ಆಸ್ತಿಗಳಿದ್ದು, ಕುಡಿಯುವ ನೀರು, ಚರಂಡಿ, ಆಸ್ತಿ ದಾಖಲೆ, ಫಾರ್ಮ್-3, ಸ್ವಚ್ಛತೆ, ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ‘ನಮಸ್ತೆ ಸಂಡೂರು, ‘ಪುರಸಭೆ ನಡೆ ಜನರ ಕಡೆ’ ಕಾರ್ಯಕ್ರಮವನ್ನು ವಾರದಲ್ಲಿ ಎರಡು ಬಾರಿ ಆಯೋಜಿಸಲಾಗುವುದು ಎಂದರು.

ಸದಸ್ಯ ಕೆ.ವಿ.ಸುರೇಶ್ ಮಾತನಾಡಿ, ಖಾತಾ ಬದಲಾವಣೆ, ಫಾರ್ಮ್ 3 ಕೇಳಲು ಹೋದರೆ ನಾಳೆ ಬಾ, ನಾಡಿದ್ದು ಬಾ ಎಂದು ಹೇಳಲಾಗುತ್ತಿದೆ. ಜನರು ಕೆಲಸ ಬಿಟ್ಟು ಅಲೆಯುವಂತಾಗಿದೆ. ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ಅದರಲ್ಲೇ ಕಸ ಹಾಕಬೇಕು ಎಂದರು.

ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಮಾತನಾಡಿ, 10ರಿಂದ 12 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕಳೆದ ಎರಡು ವಾರದಿಂದ 5ರಿಂದ 6 ದಿನಕ್ಕೊಮ್ಮೆ ನೀರು ಬಿಡುತ್ತಿದ್ದೇವೆ ಎಂದರು.

18ನೇ ವಾರ್ಡ್ ನಿವಾಸಿ ವಿಜಯೇಂದ್ರ ಮಾತನಾಡಿ, ನಮ್ಮ ಮನೆ ಬಳಿ ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ಕರೆಂಟ್ ಪದೇ ಪದೆ ಹೋಗುತ್ತಿದ್ದು, ಸಭೆಗೆ ಜೆಸ್ಕಾಂ ಸಿಬ್ಬಂದಿಯನ್ನು ಕರೆತರಬೇಕು ಎಂದು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷೆ ಎಂ.ಸಿ.ಲತಾ, ಸದಸ್ಯರಾದ ಹನುಮೇಶ್, ಸರಸ್ವತಿ, ಅಧಿಕಾರಿ ಹಗರಿ ಪ್ರಭುರಾಜ್, 17ನೇ ವಾರ್ಡ್‌ನ ಹನುಮಂತರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net