

ಮೈಸೂರು; ಅರ್ಜಿ ನೀಡಿ ಆರು ತಿಂಗಳಾದರೂ ಖಾತೆ ಬದಲಾಗಿಲ್ಲ. ಮನೆ ಕಂದಾಯ ಕಟ್ಟಲು ಕಚೇರಿಗೆ ಬಂದರೂ ಸಿಬ್ಬಂದಿ ಕೈಗೆ ಸಿಗುತ್ತಿಲ್ಲ. ನೀರಿನ ಮೀಟರ್ ಸರಿಯಿಲ್ಲದೆ ಬಿಲ್ ಜಾಸ್ತಿ ಬರುತ್ತಿದ್ದರೂ ಪರಿಶೀಲಿಸುತ್ತಿಲ್ಲ. ಹಾಳಾಗಿರುವ ಒಳಚರಂಡಿ ದುರಸ್ತಿ ಮಾಡದಿದ್ದರಿಂದ ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ…
ಇವು ಮೈಸೂರು ನಗರಪಾಲಿಕೆ ವಲಯ ಕಚೇರಿ 8ರ ಉದಯಗಿರಿ ಮತ್ತು 9ರ ಗಾಯತ್ರಿಪುರಂ ಕಚೇರಿಯಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅದಾಲತ್‌ನಲ್ಲಿ ಮಾರ್ದನಿಸಿದ ಸಾರ್ವಜನಿಕ ಸಮಸ್ಯೆಗಳು.
ಕುಡಿಯುವ ನೀರಿನ ಬಾಕಿ ಹಣವನ್ನು ಕಟ್ಟಲು ಬಡ್ಡಿ ಮನ್ನಾ ಮಾಡಿ ಒಂದೇ ಕಂತಿನಲ್ಲಿ ಕಟ್ಟಲು ಹೇಳಿರುವುದರಿಂದ ತುಂಬ ತೊಂದರೆಯಾಗಿದ್ದು, ಎರಡು-ಮೂರು ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು. ನಮಗೆ 20 ಸಾವಿರ ರೂ.ಬಿಲ್ ಬಂದಿರುವುದರಿಂದ ಒಂದೇ ಕಂತಿನಲ್ಲಿ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ 3 ಕಂತಿನಲ್ಲಿ ಕಟ್ಟುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ರಾಘವೇಂದ್ರನಗರದ ನಿವಾಸಿ ಮುದ್ದಯ್ಯ ಕೋರಿದರು.
ಇದೇ ರೀತಿ 10ರಿಂದ 25 ಸಾವಿರ ರೂ.ತನಕ ಅಸಲು ಉಳಿಸಿಕೊಂಡಿದ್ದ ರಾಮಸ್ವಾಮಿ, ಮುನಿರಾಜು, ಮಾದಮ್ಮ ಎಂಬುವರು ಕೂಡ ನಮಗೆ ಮೂರ್ನಾಲ್ಕು ಕಂತಿನಲ್ಲಿ ಬಾಕಿ ಕಟ್ಟಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಮೇಯರ್, ವಲಯವಾರು ಕಚೇರಿಗಳಲ್ಲಿ ನಡೆಸಿದ ಅದಾಲತ್‌ನಲ್ಲಿ ಈ ರೀತಿಯ ಮನವಿಗಳು ಸಾಕಷ್ಟು ಬಂದಿವೆ. ಸರ್ಕಾರದ ನಿಯಮಾನುಸಾರ ಒಂದೇ ಬಾರಿ ಅಸಲು ಕಟ್ಟಿದರೆ ಬಡ್ಡಿಮನ್ನಾ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಒಂದು ವೇಳೆ ಅದಕ್ಕೆ ಅವಕಾಶ ಇದ್ದಲ್ಲಿ ಎರಡು-ಮೂರು ಕಂತುಗಳಲ್ಲಿ ಪಾವತಿಗೆ ಅವಕಾಶ ಕೊಡಲಾಗುವುದು ಎಂದು ಭರವಸೆ ನೀಡಿದರು.
ತಂದೆಯ ಹೆಸರಿನ ಖಾತೆಯನ್ನು ಬದಲಾಯಿಸಿಕೊಡಲು ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರೂ ಆರು ತಿಂಗಳಿಂದ ಮಾಡಿಕೊಟ್ಟಿಲ್ಲ. ಕೇಳಿದರೆ ನಾಳೆ ಬನ್ನಿ ಎನ್ನುತ್ತಾರೆ. ನಾವು ಕೆಲಸ ಬಿಟ್ಟು ಎಷ್ಟು ದಿನ ಅಲೆಯುವುದು? ಎಂದು ಸೀತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೇಯರ್, ಖಾತೆ ವಿಭಾಗದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡು, ಮೂರು ದಿನಗಳಲ್ಲಿ ಇತ್ಯರ್ಥ ಪಡಿಸುವಂತೆ ತಾಕೀತು ಮಾಡಿದರು.
ಕುಡಿಯುವ ನೀರಿನ ಮೀಟರ್‌ಗಳನ್ನು ಬದಲಿಸಿಲ್ಲ. ಇದರಿಂದ ಬಿಲ್ ಹೆಚ್ಚಾಗಿ ಬರುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್, ಹಳೆಯ ಪ್ರದೇಶಗಳಲ್ಲಿ ಅಳವಡಿಸಿರುವ ಮೀಟರ್‌ಗಳು ತಾಂತ್ರಿಕ ದೋಷವಿದ್ದಲ್ಲಿ ಅದನ್ನು ಬದಲಾಯಿಸಿ ವೈಜ್ಞಾನಿಕವಾಗಿ ನೀರಿನ ಬಿಲ್ ಬರುವಂತೆ ಮಾಡಬೇಕು. ಕೂಡಲೇ ನಿಗದಿಗಿಂತ ಜಾಸ್ತಿ ಬಂದಿರುವ ಬಿಲ್‌ಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗಾಯತ್ರಿಪುರಂ ನಿವಾಸಿ ತಂಗಮಣಿ ಎಂಬುವರು ಮಾತನಾಡಿ, ಪೌರ ಕಾರ್ಮಿಕರ ಕಾಲನಿಗಳಿಗೆ ಮೂಲಸೌಕರ್ಯ ಒದಗಿಸಬೇಕು. ಇಲ್ಲಿಂದ ನಗರ ಪ್ರದೇಶದ ದೂರದ ಬಡಾವಣೆಗಳಿಗೆ ಸ್ವಚ್ಛತಾ ಕಾರ್ಯಕ್ಕೆ ಹೋಗುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕ್ಯಾತಮಾರನಹಳ್ಳಿಯಲ್ಲಿ ಯುಜಿಡಿ ಲೈನ್ ಒಡೆದಿದ್ದರೂ ತಕ್ಷಣ ಬಂದು ದುರಸ್ತಿಪಡಿಸುವುದಿಲ್ಲ. ಇದರಿಂದಾಗಿ ವಾಸನೆ ಬಂದು ಸಾರ್ವಜನಿಕರು ಮೂಗುಮುಚ್ಚಿ ಓಡಾಡುವಂತಾಗಿದೆ. ದೂರು ಕೊಟ್ಟರೂ ಪರಿಗಣಿಸಲ್ಲ ಎಂದು ದೂರಿದರು. ಸಮಸ್ಯೆ ಆಲಿಸಿದ ಮೇಯರ್, ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರಲ್ಲದೆ, ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಉಪ ಮೇಯರ್ ಡಾ.ಎಂ.ಜಿ.ರೂಪಾ, ಸದಸ್ಯರಾದ ಶ್ರೀಧರ್, ಎಚ್.ಎಂ.ಶಾಂತಾ ಕುಮಾರಿ, ಉಷಾ ನಾರಾಯಣಪ್ಪ, ಸಾತ್ವಿಕ್, ಸಾವುದ್ ಖಾನ್, ಪುಷ್ಪಲತಾ ಜಗನ್ನಾಥ್, ಬಷೀರ್ ಅಹ್ಮದ್, ಅಯಾಜ್ ಪಾಷ, ವಲಯ ಆಯುಕ್ತರಾದ ಶಿವಕುಮಾರ್, ಕೃಷ್ಣ ಇನ್ನಿತರರು ಹಾಜರಿದ್ದರು