

ಜೇವರ್ಗಿ: ಕೋಳಕೂರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ನಗರದ ಮನೆಯೊಂದರಲ್ಲಿ ಮಂಗಳವಾರ ನೀರಿನ ತೊಟ್ಟಿಗೆ ಬಿದ್ದು ಇಬ್ಬರು ಪುಟಾಣಿಗಳು ಮೃತಪಟ್ಟಿವೆ. ತಿಪ್ಪಣ್ಣ ಜಡಿ ಪುತ್ರ ಗಿರೀಶ (೩) ಮತ್ತು ತಿಪ್ಪಣ್ಣ ಸಹೋದರಿ ಪುತ್ರಿ ಶ್ರೇಷ್ಠಾ ಕಲಬುರಗಿ (೨) ಮೃತ ಶಿಶುಗಳು. ಆಟೋ ಚಾಲಕನಾಗಿರುವ ತಿಪ್ಪಣ್ಣ ಜಡಿ ಯುಗಾದಿ ನಿಮಿತ್ತ ಸಹೋದರಿಯನ್ನು ಜಾತ್ರೆಗೆ ಕರೆದುಕೊಂಡು ಬಂದಿದ್ದ. ಬೆಳಗ್ಗೆ ೯ರ ಸುಮಾರಿಗೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮಗಳು ಏಕಾಏಕಿ ಎದುರಿನ ನೀರಿನ ತೊಟ್ಟಿಯಲ್ಲಿ ಬಿದ್ದಿವೆ. ಮಧ್ಯಾಹ್ನದವರೆಗೆ ಹುಡುಕಾಡಿದರೂ ಸಿಗದಿದ್ದಾಗ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ದೂರು ದಾಖಲಿಸಿದ್ದರು. ಮಧ್ಯಾಹ್ನ ೨ರ ಸುಮಾರಿಗೆ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ತೊಟ್ಟಿಯಲ್ಲಿ ಮಕ್ಕಳ ದೇಹ ತೇಲುತ್ತಿರುವುದು ಕಂಡಿದೆ. ಕಂದಮ್ಮಗಳ ಸಾವು ಇಡೀ ಶೋಕದ ವಾತಾವರಣ ಮೂಡಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಬ್ಬಕ್ಕೆ ಬಂದಿದ್ದ ಸಹೋದರಿ, ಏಕೈಕ ಪುತ್ರ: ಯುಗಾದಿ ಹಬ್ಬಕ್ಕೆ ಕೋಳಕೂರದ ತಿಪ್ಪಣ್ಣ ಜಡಿ ಮನೆಗೆ ಸಹೋದರಿ ಬಂದಿದ್ದಳು. ಆದರೆ ವಿಧಿಯಾಟದಿಂದ ಸಹೋದರ ಮತ್ತು ಸಹೋದರಿಯ ಮಕ್ಕಳು ಒಂದೇ ದಿನ ದುರಂತ ಅಂತ್ಯ ಕಂಡಿವೆ. ತಿಪ್ಪಣ್ಣ ಜಡಿಗೆ ಮೂವರು ಪುತ್ರಿಯರು, ಒಬ್ಬನೇ ಪುತ್ರ ಇದ್ದ. ಇದೀಗ ಅವನನ್ನು ಕುಟುಂಬ ಕಳೆದುಕೊಂಡಿದೆ.: