ಮೈಸೂರು: ಮೈಸೂರು ನಗರಪಾಲಿಕೆ ವಾಣಿಜ್ಯ ಕಟ್ಟಡ ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ನೀರಿನ ತೆರಿಗೆ ಏರಿಕೆ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ.
ಈ ಕ್ರಮ ಕೈ ಬಿಡಬೇಕು ಎಂದು ಮಾಜಿ ಮೇಯರ್ ಬಿ.ಎಲ್. ಭೈರಪ್ಪ ಮೇಯರ್ ಅನ್ನು ಒತ್ತಾಯಿಸಿದರು.
ಒಳಚರಂಡಿ ನಿರ್ವಹಣೆಗೆ ಹಣ ಬೇಕಾಗಿದೆ ಎನ್ನುವ ಕಾರಣ ನೀಡಿ ಸಕಾಲದಲ್ಲಿ ತೆರಿಗೆ ಕಟ್ಟುತ್ತಾ ಬಂದಿರುವವರ ಬಳಿಯೇ ಮತ್ತೆ ನೀರಿನ ತೆರಿಗೆ ಹೆಚ್ಚು ವಸೂಲಿ ಮಾಡುವುದು ಸರಿಯಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸೋರಿಕೆ ಆಗುತ್ತಿರುವ ಕಡೆ ಪಾಲಿಕೆ ಕರ ವಸೂಲಿಗೆ ಕ್ರಮ ಕೈಗೊಳ್ಳುವ ಬದಲು ಸಕಾಲಿಕವಾಗಿ ತೆರಿಗೆ ಪಾವತಿಸುವವರ ಮೇಲೆ ಮತ್ತೆ, ಮತ್ತೆ ತೆರಿಗೆ ವಿಧಿಸುವುದು ಸರಿಯಲ್ಲ. ಈಗಾಗಲೇ 120 ಕೋಟಿ ರೂ. ನೀರಿನ ತೆರಿಗೆ ಬಾಕಿ ಉಳಿದಿದೆ. ಹಾಗಾಗಿ ಬಾಕಿ ಉಳಿಸಿಕೊಂಡಿರುವ ಬಡಾವಣೆ, ಪ್ರದೇಶಗಳಲ್ಲಿನ ನೀರಿನ ಕರ ಸಂಗ್ರಹ ಮಾಡಬೇಕು ಎಂದು ಆಗ್ರಹಿಸಿದರು.
ರಾಜಕಾರಣ ಹಾಗೂ ಜಾತಿ ಕಾರಣದಿಂದಾಗಿ ಕೆಲ ಬಡಾವಣೆ, ಪ್ರದೇಶಗಳಲ್ಲಿನ ಬಾಕಿ ಸಂಗ್ರಹಣೆಗೆ ಪಾಲಿಕೆ ಮುಂದಾಗಿಲ್ಲ. ಹೀಗಾಗಿ ಅಲ್ಲಿನ ನೀರು ಪೋಲು ಸಹ ಹೆಚ್ಚಾಗಿದೆ. ಆದ್ದರಿಂದ ಬಾಕಿ ಕರ ಸಂಗ್ರಹಣೆಗೆ ಗಮನ ಹರಿಸಿ, ಸಕಾಲಿಕವಾಗಿ ಪಾವತಿಸುವವರ ಮೇಲಿನ ಹೆಚ್ಚಳ ನಿರ್ಧಾರ ಕೈಬಿಡಬೇಕೆಂದು ಒತ್ತಾಯಿಸಿದರು. ಮುಖಂಡರಾದ ವಾಸು, ವೆಂಕಟೇಶ್ ಇದ್ದರು.