ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ಅಭಿಯಾನ

DSC_6486
Published on

ಮೈಸೂರು: ಫೆ.1 ರಿಂದ 10 ದಿನಗಳ ಕಾಲ ತಾಲೂಕಿನ ಎಲ್ಲ ಗ್ರಾಮಗಳ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ತಾಲೂಕು ಆಡಳಿತ ಮುಂದಾಗಿದೆ.

ನಜರ್‌ಬಾದ್‌ನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಪಂ ಕೆಡಿಪಿ ಸಭೆಯಲ್ಲಿ ಇಒ ಕೃಷ್ಣಕುಮಾರ್ ಅಭಿಯಾನ ಕುರಿತು ಮಾಹಿತಿ ನೀಡಿದರು.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ತಾಲೂಕಿನ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಕಲುಷಿತ ನೀರು ಸೇವಿಸಿ ತಾಲೂಕಿನ ಕಡಕೊಳ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದ ಕುರಿತು ಚರ್ಚೆ ನಡೆಯಿತು. ಈ ಸಂಬಂಧ ಮಾಹಿತಿ ನೀಡುವಂತೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ್ ಆರೋಗ್ಯಾಧಿಕಾರಿಗೆ ಸೂಚಿಸಿದರು. ಈ ಕುರಿತು ಪ್ರತಿಕ್ರಿಯಿಸಿ ತಾಲೂಕು ಆರೋಗ್ಯಾಧಿಕಾರಿ, ತೆರೆದ ಬಾವಿಯಿಂದ ಕಲುಷಿತ ನೀರನ್ನು ಗ್ರಾಮಸ್ಥರು ಕುಡಿಯುತ್ತಿದ್ದರಿಂದ ಸಮಸ್ಯೆಯಾಗಿತ್ತು. ವಾಂತಿ-ಭೇದಿಯಾಗಿ ಅಸ್ವಸ್ಥಗೊಂಡಿದ್ದರು. ಈಗ ನಿಯಂತ್ರಣಕ್ಕೆ ಬಂದಿದೆ. ಸಮಸ್ಯೆ ಉಲ್ಬಣಿಸಲು ಕಡಕೊಳ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಕಾರಣರಾಗಿದ್ದಾರೆ. ಅವರು ಸರಿಯಾದ ಶುದ್ಧ ನೀರು ಪೂರೈಸದೆ ಹಾಗೂ ತೆರೆದ ಬಾವಿಯ ನೀರು ಕುಡಿಯಲು ಯೋಗ್ಯವೇ ಎಂದು ಪರೀಕ್ಷಿಸದೆ ನಿರ್ಲಕ್ಷ್ಯವಹಿಸಿದ್ದ ಕಾರಣ ಸಮಸ್ಯೆ ಉಂಟಾಗಿತ್ತು. ಈ ಕುರಿತು ನಮ್ಮ ಕಾರ್ಯಕರ್ತರು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಇಒ ವಿರುದ್ಧ ಬೇಸರ: ನಾಲ್ಕು ವರ್ಷಗಳಿಂದ ಸ್ವಕ್ಷೇತ್ರದ ಶಾಲೆಯ ಅಭಿವೃದ್ಧಿಯನ್ನೇ ಕೈಗೊಳ್ಳದ ಬಿಇಒ ಕೃಷ್ಣ ಅವರ ನಡೆಗೆ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಬೇಸರ ವ್ಯಕ್ತಪಡಿಸಿದರು. ಅಧ್ಯಕ್ಷೆಯಾದಾಗಿನಿಂದಲೂ ಶಾಲಾ ಸಮಸ್ಯೆ ಕುರಿತು ಹೇಳುತ್ತಲೇ ಇದ್ದಾರೆ. ಈ ಬಗ್ಗೆ ಇಒ ಅವರ ಗಮನಕ್ಕೆ ತಂದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದುವರೆವಿಗೂ 7 ಲಕ್ಷ ರೂ.ಗಳ ಅನುದಾನ ನೀಡಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಕಲ್ಪಿಸಿದ್ದರೂ, ಶಾಲಾ ಕಟ್ಟಡವೇ ಸೋರುತ್ತಿರುವ ಬಗ್ಗೆ ನಿರಂತರವಾಗಿ ದೂರುಗಳು ಕೇಳಿಬರುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಇದಕ್ಕೆ ತಾಲೂಕು ಶಿಕ್ಷಣಾಧಿಕಾರಿ ಕೃಷ್ಣ ಪ್ರತಿಕ್ರಿಯಿಸಿ, ಶಾಲಾ ಕಟ್ಟಡದ ಪುನರ್ ನಿರ್ಮಾಣ ಆಗಬೇಕಿದೆ. ರಿಪೇರಿ ಮಾಡಿದರೂ ಮತ್ತೊಂದು ಕಡೆಯಲ್ಲಿ ಹಾನಿಯಾಗುತ್ತದೆ. ಹಾಗಾಗಿ ಸಂಪೂರ್ಣವಾಗಿ ನೂತನ ಕಟ್ಟಡ ಕಟ್ಟಬೇಕಿರುವ ಅವಶ್ಯಕತೆಯಿದೆ. ಹೀಗಾಗಿ ಅನುದಾನಕ್ಕಾಗಿ ಶಾಸಕರಲ್ಲಿ ಮನವಿ ಮಾಡಲಾಗಿದೆ. ಶೀಘ್ರವೇ ಶಾಸಕರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ತಾ.ಪಂ. ಇಒ ಕೃಷ್ಣಕುಮಾರ್ ಮಾತನಾಡಿ, 252 ಶಾಲೆಗಳಿಗೆ ಸೂಕ್ತ ದಾಖಲಾತಿಯೇ ಇಲ್ಲ. 102 ಶಾಲೆಗಳ ಜಾಗ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಒತ್ತುವರಿ ತೆರವು, ಮೂಲ ಸೌಕರ್ಯ, ಖಾಸಗಿ ಸಹಭಾಗಿತ್ವದಲ್ಲಿ ಶಾಲೆಗಳ ಅಭಿವೃದ್ಧಿ ಕುರಿತಂತೆ ಜ.28ರಂದು ಶಾಸಕರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಶಾಲೆ ಕಟ್ಟಡ, ಕೌಂಪೌಂಡ್ ಸಮಸ್ಯೆ, ಶೌಚಗೃಹ, ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಚರ್ಚಿಸಲಾಗುವುದು. ಜತೆಗೆ ಖಾಸಗಿ ಸಹಭಾಗಿತ್ವದಲ್ಲಿ ಶಾಲೆಗಳ ಅಭಿವೃದ್ಧಿಗೂ ಶಾಸಕರು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net