

ವಿಜಯಪುರ: ಪಟ್ಟಣದ ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿರುವ ಪಂಪ್‌ಹೌಸ್ ಬಳಿಯ ಶುದ್ಧಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಒಂದೂವರೆ ತಿಂಗಳು ಕಳೆದಿದೆ. ಆದರೆ, ಘಟಕವನ್ನು ದುರಸ್ತಿಗೊಳಿಸುವ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ.
ಈ ಘಟಕ ಸ್ಥಗಿತಗೊಂಡಿರುವ ಕಾರಣ ಜನರು ಶುದ್ಧಕುಡಿಯುವ ನೀರಿಗಾಗಿ 7ನೇ ವಾರ್ಡ್‌ನ ಅಶ್ವತ್ಥಕಟ್ಟೆ ಬಳಿಯ ಘಟಕಕ್ಕೆ ಮುಗಿಬೀಳಲಾರಂಭಿಸಿದ್ದಾರೆ. ಇದರಿಂದಾಗಿ ಆ ಘಟಕದ ಬಳಿ ಜನರ ನೂಕುನುಗ್ಗಲು ಉಂಟಾಗಿ, ಗಲಾಟೆಗಳು ಆಗುವುದು ಸಾಮಾನ್ಯವಾಗುತ್ತಿದೆ.
ಬೇಸಿಗೆಯಿಂದಾಗಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಕೆಟ್ಟಿದೆ. ಇದನ್ನು ನಿರ್ವಹಿಸುತ್ತಿದ್ದ ಗುತ್ತಿಗೆದಾರರು ಗುತ್ತಿಗೆ ಅವಧಿ ಮುಗಿಯಿತೆಂದು ಬಿಟ್ಟು ಹೋಗಿದ್ದಾರೆ. ಘಟಕದಲ್ಲಿನ ಯಂತ್ರೋಪಕರಣಗಳು ತುಕ್ಕುಹಿಡಿಯುತ್ತಿವೆ. ಇದನ್ನು ದುರಸ್ತಿ ಮಾಡಿಸುವ ಬಗ್ಗೆಯೂ ಪುರಸಭೆ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಶುದ್ಧಕುಡಿಯುವ ನೀರಿನ ಘಟಕಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಘಟಕವನ್ನು ದುರಸ್ತಿಗೊಳಿಸಲು ಪುರಸಭೆಗೆ ಸಾಧ್ಯವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಘಟಕವನ್ನು ದುರಸ್ತಿಗೊಳಿಸಿ, ಜನರಿಗೆ ನೀರು ಲಭಿಸುವಂತೆ ಮಾಡಬೇಕು. ಎಂ. ಸತೀಶ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ನೀರಿನ ಘಟಕದ ನಿರ್ವಹಣೆಯ ಗುತ್ತಿಗೆಯನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ಕೊಡಲಾಗುತ್ತಿತ್ತು. ಇದೀಗ ಗುತ್ತಿಗೆ ಅವಧಿ ಮುಗಿದಿದೆ. ಹಾಗಾಗಿ ಹಿಂದಿದ್ದ ಗುತ್ತಿಗೆದಾರರು ಇತ್ತ ಸುಳಿಯುತ್ತಿಲ್ಲ. ಘಟಕವನ್ನು ನಮಗೆ ಹಸ್ತಾಂತರ ಮಾಡಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದೇವೆ. ಘಟಕದಲ್ಲಿ ಏನಿದೆ ಎಂಬ ಮಾಹಿತಿ ಇಲ್ಲ. ನಾವು ಏನಾದರೂ ಮಾಡಲು ಹೋದರೆ, ಗುತ್ತಿಗೆದಾರರು ಸಮಸ್ಯೆ ಮಾಡಬಹುದು. ಇಂಥ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸಿದ್ದೇವೆ. ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ