ನೀರಿನ ಅಕ್ರಮ ಬಳಕೆಗೆ ಕಡಿವಾಣ, ಎರಡು ತಿಂಗಳೊಳಗೆ ಬಾಕಿ ಕೆರೆಗಳಿಗೆ ನೀರು, ಸಚಿವ ಮಾಧುಸ್ವಾಮಿ ಭರವಸೆ

22CBP5
Published on

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಅಂತರ್ಜಲವೃದ್ಧಿಗಾಗಿ ಅನುಷ್ಠಾನಕ್ಕೆ ತಂದಿರುವ ಎಚ್.ಎನ್.ವ್ಯಾಲಿ ಯೋಜನೆಯ ಸಂಸ್ಕರಿಸಿದ ನೀರನ್ನು ಮಾರ್ಗ ಮಧ್ಯೆ ಅಕ್ರಮವಾಗಿ ಬಳಸಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಎಚ್.ಎನ್.ವ್ಯಾಲಿ ನೀರು ಹರಿಯುತ್ತಿರುವ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆ ಮಂಗಳವಾರ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವಲ್ಲಿ ಎಚ್.ಎನ್.ವ್ಯಾಲಿ ಯೋಜನೆ ಸಹಕಾರಿಯಾಗಿದೆ. ಯೋಜನೆ ವ್ಯಾಪ್ತಿಯ ಕೊನೆಯ ಕೆರೆಗೂ ನೀರು ಹರಿಯಬೇಕು. ಆಗ ಮಾತ್ರ ಉದ್ದೇಶ ಪೂರ್ಣಗೊಳ್ಳುತ್ತದೆ ಎಂದರು.

ಎಚ್.ಎನ್.ವ್ಯಾಲಿಯ ನೀರನ್ನು ಮಾರ್ಗ ಮಧ್ಯೆ ಕೆಲವರು ಅನಧಿಕೃತವಾಗಿ ಉಪಯೋಗಿಸಿಕೊಳುತ್ತಿರುವ ದೂರುಗಳು ಕೇಳಿ ಬಂದಿದ್ದು, ಕಡಿವಾಣ ಹಾಕಲಾಗುವುದು. ನಿಯಮ ಉಲ್ಲಂಘಿಸಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಶೀಘ್ರವೇ ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೂ ನೀರು ಹರಿಯಲಿದೆ ಎಂದು ಮಾಧುಸ್ವಾಮಿ ಭರವಸೆಯಿತ್ತರು.

ಜಿಲ್ಲೆಯಲ್ಲಿ ಯಾವ ಕೆರೆಗೆ ಎಷ್ಟರ ಮಟ್ಟಿಗೆ ನೀರು ಹರಿದಿದೆ ಎನ್ನುವುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಎಚ್.ಎನ್.ವ್ಯಾಲಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್‌ಡಿ ನೀರು ಹರಿಯಬೇಕಿತ್ತು, ಆದರೆ ಅಷ್ಟು ಪ್ರಮಾಣದ ನೀರು ದೊರೆಯುತ್ತಿಲ್ಲ. ಆದ್ದರಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈಗ 100ರಿಂದ 110 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. ಎರಡು ತಿಂಗಳ ಒಳಗೆ ಬಾಕಿ ನೀರನ್ನು ಹರಿಸಲಾಗುವುದು ಎಂದು ಹೇಳಿದರು.

ಕಂದವಾರ ಕೆರೆ ತುಂಬಿದ ನಂತರ ಗೋಪಾಲಕೃಷ್ಟ ಕೆರೆಗೆ ನೀರು ತುಂಬಿಸಬೇಕೆಂದು ಸೂಚಿಸದ ಸಚಿವರು, ದೊಡ್ಡ ಕೆರೆಗಳು ತುಂಬುವವರೆಗೆ ಕಾಯದೆ 30ರಿಂದ 40 ಎಂಸಿಎಫ್‌ಟಿ ಸಾಮರ್ಥ್ಯದ ಕೆರೆಗಳನ್ನು ಮೊದಲು ತುಂಬಿಸುವಂತೆ ಸೂಚನೆ ನೀಡಿದರು.

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ನರೇಂದ್ರ ಬಾಬು ಮತ್ತಿತರರು ಇದ್ದರು.

ವೃಷಭಾವತಿ ಡಿಪಿಆರ್ ತಯಾರು : 1400 ಕೋಟಿ ವೆಚ್ಚದ ವೃಷಭಾವತಿ ವ್ಯಾಲಿ ಯೋಜನೆಯ ಮೂಲಕ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ತುಮಕೂರಿನ ಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಯ ಡಿಪಿಆರ್ ತಯಾರಾಗುತ್ತಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಶಿಡ್ಲಘಟ್ಟದ ಕೆರೆಗಳಿಗೆ ನೀರು ಹರಿಸಿ : ಎಚ್.ಎನ್.ವ್ಯಾಲಿಯ ಸಂಸ್ಕರಿಸಿದ ನೀರನ್ನು ಶಿಡ್ಲಘಟ್ಟ ತಾಲೂಕಿನ ಕೆರೆಗಳಿಗೆ ಹರಿಸುವುದು ಹಾಗೂ ವಿವಿಧೆಡೆ ನೀರಿನ ಅಕ್ರಮ ದುರ್ಬಳಕೆಗೆ ಕಡಿವಾಣ ಹಾಕಲು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಸಚಿವ ಮಾಧುಸ್ವಾಮಿಗೆ ಮನವಿ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸಚಿವರಿಗೆ ಎಚ್.ಎನ್.ವ್ಯಾಲಿ ಯೋಜನೆಯ ತ್ವರಿತ ಅನುಷ್ಠಾನದ ಅಗತ್ಯತೆ ಬಗ್ಗೆ ಗಮನ ಸೆಳೆದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಮಳೆ ಅಭಾವ ಮತ್ತು ಕೊಳವೆಬಾವಿ ವೈಫಲ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಎಚ್.ಎನ್.ವ್ಯಾಲಿಯ ನೀರನ್ನು ತ್ವರಿತವಾಗಿ ಶಿಡ್ಲಘಟ್ಟ ತಾಲೂಕಿನ ಎಲ್ಲ ಕೆರೆಗಳಿಗೂ ತುಂಬಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗೌರವಾಧ್ಯಕ್ಷ ತಮ್ಮಣ್ಣ, ಉಪಾಧ್ಯಕ್ಷ ಮುನಿನಂಜಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಬಸವರಾಜ್, ಕಾರ್ಯದರ್ಶಿ ಗುಡಿಹಳ್ಳಿ ಕೆಂಪಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net