

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿ ಕಳೆದ ೧೦ ದಿನಗಳಿಂದ ನೀರು ಪೂರೈಕೆ ಮಾಡಿಲ್ಲ. ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಗತ್ ವೃತ್ತದಲ್ಲಿರುವ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ್ ಅವರ ಮನೆ ಗೇಟ್ ಎದುರು ಜನರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಸುಮಾರು ಒಂದುವರೆ ಗಂಟೆ ಆಯುಕ್ತರ ವಸತಿ ನಿಲಯದ ಎದುರು ಖಾಲಿ ಕೊಡದೊಂದಿಗೆ ಮಹಿಳೆಯರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ೧೦ ದಿನದಿಂದ ನೀರು ಬರುತ್ತಿಲ್ಲ. ಬೇಕಾಬಿಟ್ಟಿಯಾಗಿ ಸಮಯಕ್ಕೆ ಸರಿಯಾಗಿ ಬಿಡುವುದಿಲ್ಲ. ಆಗೊಮ್ಮೆ ಈಗೊಮ್ಮೆ ನೀರು ಬಿಡುತ್ತಿದ್ದು, ನಿತ್ಯ ತೊಂದರೆ ಎದುರಿಸುವಂತಾಗಿದೆ. ನಿಗದಿತ ಸಮಯಕ್ಕೆ ನೀರು ಬಿಡುತ್ತಿಲ್ಲ. ಜನರು ಕೆಲಸಕ್ಕೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೀರು ಬಿಟ್ಟರೆ ತೆಗೆದುಕೊಳ್ಳುವವರೇ ಇರುವುದಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಭುವನೇಶ ದೇವಿದಾಸ್ ಪಾಟೀಲ್ ಎದುರು ಅಳಲು ತೋಡಿಕೊಂಡ ಜನರು, ಐದು ದಿನಕ್ಕೊಮ್ಮೆಯಾದರೂ ಬಿಡಿ ಆದರೆ ನಿಗದಿತ ಸಮಯಕ್ಕೆ ಬಿಡಬೇಕು. ಟ್ಯಾಂಕರ್ ನೀರು ಪೂರೈಕೆ ಬೇಡ ಎಂದು ಮನವಿ ಮಾಡಿದರು. ಟ್ಯಾಂಕರ್ ನೀರಿನಿಂದ ಬಡಾವಣೆಯಲ್ಲಿ ಜಗಳವಾಗುತ್ತದೆ. ನಲ್ಲಿ ನೀರು ನಿಗದಿತ ಸಮಯಕ್ಕೆ ನೀಡಿ ಎಂದು ಮನವಿ ಮಾಡಿದರು.
ನೀರು ಪೂರೈಸುವ ಮುಖ್ಯ ಪೈಪ್‌ನಲ್ಲಿ ದೋಷ ಕಾಣಿಸಿಕೊಂಡು ಲೀಕೇಜ್ ಆಗಿದ್ದರಿಂದ ಸಮಸ್ಯೆ ಎದುರಾಗಿದ್ದು, ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಸಲಾಗುತ್ತದೆ. ಒಂದು ದಿನದಲ್ಲಿ ನಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಜನರು ವಾಪಸ್ ಆದರು.