ನೀರಾವರಿಯಿಂದ ರೈತರಿಗೆ ನೆರವು

2Athani1
ಕೋಹಳ್ಳಿ ಗ್ರಾಮದಲ್ಲಿ ಸಂಗಮೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ಬದ್ರುದಿನ್ ಡೊಂಗರಗಾಂವ, ಶಿವಗೌಡ ಮುಧೋಳ, ವಿಠ್ಠಲ ಕಂಕಣವಾಡಿ, ಕೇದಾರಿ ವಳಸಂಗ, ಬಾಳು ಸರಗರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿ ರೈತರ ಬಾಳಿಗೆ ಬೆಳಕಾಗುವ ಕೆಲಸವನ್ನು ಮಾಡಿದೆ. ಪ್ರಸ್ತುತ 18 ಲಕ್ಷ ರೈತರಿಗೆ 16,000 ಕೋಟಿ ಬಡ್ಡಿ ರಹಿತ ಸಾಲ ಬಳಕೆಯಾಗುತ್ತಿದ್ದು, ನಾನು ಸಹಕಾರ ಸಚಿವನಾಗಿ ಹಾಕಿದ ಪರಿಕಲ್ಪನೆ ಇಂದು ಅಥಣಿ ತಾಲೂಕಿಗೆ ವರದಾನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಸಂಗಮೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕನ್ನು ಹಸಿರು ಮಾಡುವ ಉದ್ದೇಶದಿಂದ ಹಿಪ್ಪರಗಿ ಅಣೆಕಟ್ಟು ಯೋಜನೆ ಮೂಲಕ 1.84 ಲಕ್ಷ ಹೆಕ್ಷೇರ್‌ಗೆ ನೀರಾವರಿ ಕಲ್ಪಿಸಿ ಸುಮಗ್ರ ಹಾಗೂ ಸಮದ್ಧ ತಾಲೂಕನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು. 120 ಕೋಟಿ ರೂ. ಗಳಲ್ಲಿ 7 ಗ್ರಾಮಗಳ ಕೆರೆ ತುಂಬಿಸುವ ಕೆಲಸಕ್ಕೆ ಅನುದಾನ ದೊರೆತು ಟೆಂಡರ್ ಕೆಲಸವಾಗಿದೆ. ಒಂದು ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯೋಜನೆಯಿಂದ 7 ತಿಂಗಳು ರೈತರ ಹೊಲಗಳಿಗೆ ನೀರು ಹರಿಸಲಾಗುವುದು. ಅಥಣಿ-ಕೊಟ್ಟಲಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು 35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶೀಘ್ರ ಚಾಲನೆ ದೊರೆಯಲಿದೆ.

180 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ, 120 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾಗುವ ಕಷಿ ವಿದ್ಯಾಲಯ ತಾಲೂಕಿಗೆ ಹೆಮ್ಮೆ ತಂದಿವೆ ಎಂದರು. ನೂರಅಹಮ್ಮದ್ ಡೊಂಗರಗಾಂವ, ಮಹಾದೇವ ಬಿರಾದಾರ, ಬದ್ರುದಿನ್ ಡೊಂಗರಗಾಂವ, ಶೇಖರ ನೇಮಗೌಡ, ಸೈಬಣ್ಣ ಕಮತಗಿ, ಈರಗೌಡ ನೇಮಗೌಡ, ಸೋಮನಿಂಗ ಪೂಜಾರಿ, ಅಪ್ಪು ಪಾಟೀಲ, ಶಂಕರ ಪೂಜಾರಿ, ವಿಠ್ಠಲ ಕಂಕಣವಾಡಿ, ಕೇದಾರಿ ವಳಸಂಗ, ಬಾಳು ಸರಗರ, ಶೇಖರ ಹಾಲಳ್ಳಿ, ವಿಷ್ಣು ನಾಗಣಿ ಇತರರಿದ್ದರು.

ನಿಮಗೆ ನಾನು ಚಿರಋಣಿ

ನಾನು ಅಧಿಕಾರದ ಬೆನ್ನು ಹತ್ತಿ ಎಂದಿಗೂ ಹೋಗಿಲ್ಲ. ಪಕ್ಷದ ನಿಷ್ಠಾವಂತ ಸೇವಕನಾಗಿ ಕೆಲಸ ಮಾಡಿದ ಪರಿಣಾಮ ಪಕ್ಷ ನನಗೆ ಉಪಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆಸಿದೆ. ಈಗ ಅಧಿಕಾರವಿರದಿದ್ದರೂ ಪ್ರೀತಿಯಿಂದ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿದ ನಿಮಗೆ ನಾನು ಚಿರಋಣಿ. ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವಕನಾಗಿ ಕಾರ್ಯನಿರ್ವಹಿಸುವೆ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಜನರ ಕಷ್ಟ-ನಷ್ಟಗಳಿಗೆ ಹೆಗಲು ಕೊಟ್ಟು ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವ ಸವದಿಯವರ ಕಾರ್ಯ ಶ್ಲಾಘನೀಯ. ಅವರ ಮುತ್ಸುದ್ಧಿತನ ಹಾಗೂ ಜಾಣ್ಮೆಗೆ ಮುಖ್ಯಮಂತ್ರಿಯಾಗುವ ಎಲ್ಲ ಯೋಗ್ಯತೆಗಳಿವೆ.| ಗುರುಪಾದೇಶ್ವರ ಸ್ವಾಮೀಜಿ ಯಕ್ಕಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net