

ಚಿಕ್ಕಬಳ್ಳಾಪುರ: ನೀರಾವರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಸಮರ್ಪಕವಾಗಿ ಧ್ವನಿ ಎತ್ತುತ್ತಿಲ್ಲ. ಇದರ ವಿರುದ್ಧ ಬೀದಿಗೆ ಬಂದು ಹೋರಾಟ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲೂಕಿನ ಪೆರೇಸಂದ್ರದಲ್ಲಿ ಜೆಡಿಎಸ್ ಕೈಗೊಂಡಿದ್ದ ಜಲಧಾರೆ ಯಾತ್ರೆಯನ್ನುದ್ದೇಶಿಸಿ ಮಾತನಾಡಿ, ಮೊದಲಿನಿಂದಲೂ ನೀರಾವರಿ ಜತೆಗೆ ಹಲವು ಸವಲತ್ತುಗಳ ವಿಚಾರದಲ್ಲಿ ಕರ್ನಾಟಕಕ್ಕೆ ಸಮರ್ಪಕವಾಗಿ ನ್ಯಾಯ ಸಿಗುತ್ತಿಲ್ಲ. ಇದರ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆದರೂ ಕಿವಿಗೊಡಲಿಲ್ಲ. ಇದಕ್ಕೆ ನಮ್ಮ ನೀರು, ನಮ್ಮ ಹಕ್ಕು ಉಳಿಸಿಕೊಳ್ಳಲು ಹೋರಾಟ ನಡೆಸಲಾಗುತ್ತಿದೆ ಎಂದರು. ಈ ಭಾಗಕ್ಕೆ ಎತ್ತಿನಹೊಳೆ ಯೋಜನೆಯ ನೀರು ಹರಿದು ಬಂದರೆ ಜನರ ಪುಣ್ಯ. ಮೊದಲು 8 ಸಾವಿರ, ಬಳಿಕ 12 ಸಾವಿರ, ಇದೀಗ 24 ಸಾವಿರ ಯೋಜನೆ ವೆಚ್ಚವಾಗಿದೆ. ಇದರ ಪ್ರಚಾರ ಜಾಸ್ತಿ. ಆದರೆ, ಇದರ ಅನುಷ್ಠಾನ ಪ್ರಾರಂಭದ ಹಂತದಲ್ಲಿಯೇ ಹಲವು ವರ್ಷಗಳಿಂದ ಉಳಿದುಕೊಂಡಿದೆ ಎಂದರು.
ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೋಮು ಗಲಭೆಗಳಿಗೆ ಕಡಿವಾಣ ಹಾಕಿ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಯಿತು. ಅದೇ ರೀತಿ ಸಮ್ಮಿಶ್ರ ಸರ್ಕಾರ ಆಡಳಿತಾವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಸೇರಿ ಮಹತ್ತರವಾದ ಘೋಷಣೆಗಳನ್ನು ಅನುಷ್ಠಾನಗೊಳಿಸಿದರು. ಬೆಂಬಲಿತ ಪಕ್ಷಗಳ ಕಿರುಕುಳ ಸಹಿಸಿಕೊಂಡು ಜನರ ಹಿತವನ್ನು ಎತ್ತಿ ಹಿಡಿದರು. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ನೀಡಿ, ರಾಜ್ಯದ ಹಿತ ಕಾಪಾಡಬೇಕು ಎಂದು ಜನರಿಗೆ ಮನವಿ ಮಾಡಿದರು.
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ನಿಜವಾದ ರೈತರ ಮಗನಾಗಿ ಕೆಲಸ ಮಾಡುತ್ತಿರುವ ಏಕೈಕ ವ್ಯಕ್ತಿ ಎಚ್.ಡಿ.ದೇವೇಗೌಡ. ಅವಕಾಶವಿದ್ದರೂ ಸೂಟು ಬೂಟು ಪ್ರದರ್ಶಿಸಿಕೊಂಡು ಸುಮ್ಮನೆ ಕೂರಲಿಲ್ಲ. ಇಳಿ ವಯಸ್ಸಿನಲ್ಲೂ ಬೀದಿಗೆ ಬಂದು ಅನ್ನದಾತರ ಪರ ಧ್ವನಿ ಎತ್ತುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿ ಸಾಧನೆಯು ಮೊಟ್ಟೆ, ಬಟ್ಟೆ ಮತ್ತು ಹೊಟ್ಟೆ ಎನ್ನುವಂತಾಗಿದೆ. ಸಚಿವರು ಲೂಟಿ ಹೊಡೆಯುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ. ಈಗಾಗಲೇ ಅನೇಕ ಸಚಿವರು ರಾಜೀನಾಮೆ ನೀಡಿ ಮನೆಗೆ ಹೋಗಿದ್ದಾರೆ. ಇಷ್ಟಾದರೂ ತಪ್ಪಿತಸ್ಥರ ಪರವಾಗಿ ನಾಯಕರು ಹೇಳಿಕೊಡುತ್ತಿರುವುದು ನಾಚಿಕೆಗೇಡು ಎಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ರಚನೆ, ಸರ್ಕಾರಿ ಭವನಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಸೇರಿ ಹಲವು ಅಭಿವೃದ್ಧಿ ಕೆಲಸಗಳ ಕೊಡುಗೆಗಳ ರೂವಾರಿ ಎಚ್.ಡಿ.ಕುಮಾರಸ್ವಾಮಿ. ಇದೀಗ ಜಿಲ್ಲೆಯ ನೀರಾವರಿ ವಿಚಾರವಾಗಿ ಜಲಧಾರೆ ಯಾತ್ರೆಯ ಮೂಲಕ ಜನರ ಬಳಿಗೆ ಬರುತ್ತಿದ್ದು, ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಳ್ಳೆಯ ಆಡಳಿತ ನೀಡಲಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ನಗರಸಭಾ ಉಪಾಧ್ಯಕ್ಷೆ ಆರ್.ವೀಣಾರಾಮು, ಮುಖಂಡರಾದ ಅಬ್ಬಾಸ್, ಮುನಿರಾಜು ಮತ್ತಿತರರು ಇದ್ದರು.
ಜಲಧಾರೆಗೆ ನೀರು ಸಂಗ್ರಹ: ತಾಲೂಕಿನ ವಿವಿಧ ಭಾಗಗಳಲ್ಲಿ ಜಲಧಾರೆ ಯಾತ್ರೆ ಅಂಗವಾಗಿ ಅಮಾನಿ ಭೈರಸಾಗರ ಕೆರೆ, ಜಕ್ಕಲಮಡಗು ಜಲಾಶಯ, ಶ್ರೀನಿವಾಸ ಸಾಗರ ಕೆರೆ ಮತ್ತು ಗೋಪಾಲಕೃಷ್ಣ ಕೆರೆಯ ಜಲಮೂಲಗಳಿಂದ ಮಹಿಳೆಯರು ಕಳಸದಲ್ಲಿ ನೀರು ಸಂಗ್ರಹಿಸಿದರು. ಪ್ರಮುಖ ರಸ್ತೆಗಳಲ್ಲಿ ಮುಖಂಡರು ಬೈಕ್ ರ‌್ಯಾಲಿ, ಕಾಲ್ನಡಿಗೆಯ ಮೆರವಣಿಗೆ ನಡೆಸಿದರು.
ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಆದರೂ ಕೋಮು ಗಲಭೆ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೀಳು ರಾಜಕಾರಣ ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿಯ ವಿಚಾರವನ್ನು ಪ್ರಮುಖವಾಗಿ ಪರಿಗಣಿಸುತ್ತಿಲ್ಲ. ಜೆ.ಕೆ.ಕೃಷ್ಣಾರೆಡ್ಡಿ, ಶಾಸಕ