ನೀರಾವರಿ ಯೋಜನೆಗಳ ಜಾರಿಗೆ ಸಂಕಲ್ಪ : ಶಾಸಕ ಕೃಷ್ಣಾರೆಡ್ಡಿ ಅಭಿಮತ, ವಕ್ಕಲೇರಿಯಲ್ಲಿ ಜನತಾ ಜಲಧಾರೆ ಯಾತ್ರೆ ಸ್ವಾಗತಿಸಿದ ಮುಖಂಡರು

2
Published on

ಕೋಲಾರ: ಕಾಂಗ್ರೆಸ್​, ಬಿಜೆಪಿ ಬೆಂಬಲದೊಂದಿಗೆ 2 ಬಾರಿ ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತ್ತಾದರೂ, ಸಮ್ಮಿಶ್ರ ಸರ್ಕಾರಗಳಿಂದ ಯಾವ ಲಾಭವೂ ಆಗಲಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬೆಂಬಲಿಸಿದ್ದ ಪಕ್ಷದವರು ಬಿಡಲಿಲ್ಲ ಎಂದು ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು. ಮಾಲೂರಿನಿಂದ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಜನತಾ ಜಲಧಾರೆ ಯಾತ್ರೆಗೆ ತಾಲೂಕಿನ ವಕ್ಕಲೇರಿ ರಾಮಮಂದಿರದಲ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮತದಾರರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಪೂರ್ಣ ಬಹುಮತ ನೀಡಬೇಕು. ಹಾಗಾದರೆ 5 ವರ್ಷದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕುಮಾರಸ್ವಾಮಿ ಅವರು ತೀಮಾರ್ನಿಸಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರದ ಜನರು ನೀರಾವರಿ ಯೋಜನೆಗಳ ವಿಚಾರದಲ್ಲಿ ವಂಚಿತರಾಗಿದ್ದೇವೆ. ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಪಕ್ಷದ ವರಿಷ್ಠರು ಸಂಕಲ್ಪ ಮಾಡಿದ್ದಾರೆ. ಜನತಾ ಜಲಧಾರೆ ಯಾತ್ರೆ ಕೈಗೊಂಡು ಶಾಶ್ವತ ನೀರು ಒದಗಿಸಲು ಕೈ ಹಾಕಿದ್ದಾರೆ. ರಾಜ್ಯದ ಯಾವ ನದಿಯಿಂದ ಯಾವ ಜಿಲ್ಲೆಗೆ ನೀರು ಹರಿಯಬೇಕು ಎನ್ನುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದರು. ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ವಾರ್ಷಿಕ 50 ಲಕ್ಷ ಕೋಟಿ ರೂ. ಮೀಸಲಿಟ್ಟು 5 ವರ್ಷದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಇಲ್ಲವಾದರೆ ಪಕ್ಷವನ್ನೇ ವಿಸರ್ಜಿಸುವುದಾಗಿಯೂ ಕುಮಾರಸ್ವಾಮಿ ಪ್ರತಿಜ್ಞೆ ಮಾಡಿದ್ದಾರೆ. ಈ ಮೊದಲು 25 ಸಾವಿರ ಕೋಟಿ ರೂ. ಸಾಲ ಮನ್ನಾವನ್ನು 1 ವರ್ಷದಲ್ಲಿ ಮಾಡಿದಂತೆಯೇ ಈ ಕಾರ್ಯವನ್ನೂ ಮಾಡಲಿದ್ದಾರೆ. ಅವರು ಸಿಎಂ ಆದರೆ ಜಿಲ್ಲೆಯ ಭಾಗಕ್ಕೂ ನೀರಾವರಿ ಅನುಕೂಲವಾಗಲಿದೆ. ಎಲ್ಲರೂ ಆಶೀರ್ವದಿಸಬೇಕು ಎಂದರು. ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಜೆಡಿಎಸ್​ ಬೆಂಬಲಿಸಬೇಕು ಎಂದರು.

ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ಜೆಡಿಎಸ್​ ಅಧಿಕಾರಕ್ಕೆ ಬಂದರೆ, ನಿಂತು ಹೋಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲೂ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಎಲ್ಲರೂ ಸಹಕರಿಸಬೇಕು ಎಂದರು. ಮುಖಂಡರಾದ ವಕ್ಕಲೇರಿ ರಾಮು, ಚೌಡೇಶ್ವರಿ ರಾಮು, ಡಾ.ರಮೇಶ್​, ಜಿ.ಇ.ರಾಮೇಗೌಡ ಇದ್ದರು.

ವಕ್ಕಲೇರಿಯಲ್ಲಿ ಸ್ವಾಗತ: ಜಲಧಾರೆ ರಥ ಮಾಲೂರು ಕ್ಷೇತ್ರದಿಂದ ಶುಕ್ರವಾರ ವಕ್ಕಲೇರಿ ಮೂಲಕ ಕೋಲಾರ ಕ್ಷೇತ್ರಕ್ಕೆ ಬಂದಿತು. ಎಪಿಎಂಸಿ ಮಾರುಕಟ್ಟೆಯಿಂದ ಆರಂಭಗೊಂಡ ಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಭೈರೇಗೌಡ ನಗರದಲ್ಲಿ ಮುಕ್ತಾಯಗೊಂಡಿತು. ರಥಯಾತ್ರೆಗೆ ಸಿಗದ ಬೆಂಬಲ: ಜನತಾ ಜಲಧಾರೆ ಯಾತ್ರೆಗೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನಬೆಂಬಲ ಸಿಗಲಿಲ್ಲ. ಮಾಲೂರಿನಲ್ಲಿ ಅಭ್ಯರ್ಥಿ ಘೋಷಣೆಯಾಗಿದ್ದರಿಂದ ಯಾತ್ರೆ, ಸಮಾರಂಭಕ್ಕೆ ಆಸೆ ಪೂರೈಸುವ ಮೂಲಕ ಜನರನ್ನು ಕರೆತರುವಲ್ಲಿ ಗೊಂದಲ ಏರ್ಪಡಲಿಲ್ಲ. ಆದರೆ ಕೋಲಾರ ಕ್ಷೇತ್ರದಲ್ಲಿ ಸಿಎಂಆರ್​ ಶ್ರೀನಾಥ್​ ಮತ್ತು ಕುರ್ಕಿ ರಾಜೇಶ್ವರಿ ನಡುವೆ ಟಿಕೆಟ್​ಗಾಗಿ ಪೈಪೋಟಿಯಿದ್ದು, ಮುಂದೇನು ಎಂಬ ಚಿಂತೆಯಲ್ಲಿ ಹೆಚ್ಚು ಜನರನ್ನು ಕರೆತರಲು ಇಬ್ಬರೂ ಒಟ್ಟಾಗಿ ಪ್ರಯತ್ನಿಸಲಿಲ್ಲ ಎಂಬ ಮಾತುಗಳು ಕೇಳಿಬಂದವು. ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮಾಲೂರಿನಲ್ಲಿ ಅಕ್ಕಿ, ಸೀರೆ, ಪೆಟ್ರೋಲ್​, ಹಣ ನೀಡಿದ್ದು, ಕೋಲಾರದಲ್ಲೂ ಹಲವು ಮಹಿಳೆಯರು "ನಮ್ಮ ಕೂಲಿ ಕೊಟ್ಬಿಡಿ, ರಣ ಬಿಸಿಲಿನಲ್ಲಿ ಕುಂಬ ಹೊತ್ತು ಸಾಗಲಾಗುತ್ತಿಲ್ಲ, ನಾವು ಹೊರಟು ಹೋಗ್ತೀವಿ' ಎಂದು ಮುಖಂಡರನ್ನು ಕೇಳುತ್ತಿದ್ದುದು ಕಂಡು ಬಂದಿತು. ಯಾತ್ರೆಯಲ್ಲಿ ಮಹಿಳೆಯರು ಹೆಚ್ಚಿಗೆ ಪಾಲ್ಗೊಂಡಿದ್ದು, ರಣಬಿಸಿಲಿನಲ್ಲಿ ಕೋಲಾರ ಸುತ್ತು ಹೊಡೆಯುವಷ್ಟರಲ್ಲಿ ಬಸವಳಿದು ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net