ನೀರಾವರಿ ಯೋಜನೆಯಿಂದ ರೈತರ ಸಮಗ್ರ ಅಭಿವೃದ್ಧಿ

24HNL1
Published on

ಹಾನಗಲ್ಲ: ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಹೊಂದಿ ಯಶಸ್ವಿಯಾಗಬಹುದು. ರೈತರಿಗೆ ನೀರು ಮತ್ತು ವಿದ್ಯುತ್ ಲಭ್ಯವಾದರೆ ಸರ್ಕಾರದತ್ತ ಕೈ ಚಾಚುವ ಅಗತ್ಯ ಬರಲಾರದು. ಈ ನಿಟ್ಟಿನಲ್ಲಿ ನೀರಾವರಿ, ಗುಣಮಟ್ಟದ ವಿದ್ಯುತ್​ಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

ತಾಲೂಕಿನ ಬಾಳಂಬೀಡ ಹಾಗೂ ಚನ್ನಾಪುರ ಗ್ರಾಮಗಳಲ್ಲಿ ಪ್ರಾಥಮಿಕ ಶಾಲಾ ಕೊಠಡಿಗಳಿಗೆ, ಆಂಜನೇಯ ದೇವಸ್ಥಾನ ಕಟ್ಟಡಕ್ಕೆ ಅಡಿಗಲ್ಲು ಹಾಗೂ ಹೈ-ಮಾಸ್ಟ್ ವಿದ್ಯುತ್ ದೀಪ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು ನಾಲ್ಕಾರು ದಿನಗಳಲ್ಲಿ ಬೆಳೆ ವಿಮೆ ಪರಿಹಾರ ಘೊಷಣೆಯಾಗಲಿದೆ. ಪ್ರತಿವರ್ಷದ ಫಸಲಿನ ಶೇ. 10ರಷ್ಟು ಭಾಗವನ್ನು ವಿಮೆ ಕಂತು ಪಾವತಿಸಲು ತೆಗೆದಿರಿಸಬೇಕು. ಈ ಮೊದಲು ಬೆಳೆಸಾಲದಲ್ಲಿ ವಿಮೆ ಕಂತನ್ನು ಕಡ್ಡಾಯವಾಗಿ ಕಡಿತಗೊಳಿಸುವ ಕಾನೂನು ಜಾರಿಯಲ್ಲಿತ್ತು. ಈ ವರ್ಷದಿಂದ ಅದು ಬದಲಾಗಿ ರೈತರೆ ಸ್ವಯಂ ಪ್ರೇರಿತವಾಗಿ ವಿಮೆ ಕಂತು ಪಾವತಿಸುವಂತೆ ಬದಲಾಯಿಸಲಾಗಿದೆ. ರೈತ ಸಮುದಾಯ ಕಂತು ಪಾವತಿಸಿ ಬೆಳೆವಿಮೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿ ಬಾಳಂಬೀಡ ಏತ ನೀರಾವರಿ ಯೋಜನೆಯಡಿ ವರದಾ ನದಿಯಿಂದ ತಾಲೂಕಿನ 172 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ. ರೈತರು ಅನಗತ್ಯವಾಗಿ ಅಸಹಕಾರ ತೋರದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಶಿವಲಿಂಗಪ್ಪ ತಲ್ಲೂರ, ಉದಯ ವಿರುಪಣ್ಣನವರ, ಗ್ರಾಪಂ ಅಧ್ಯಕ್ಷ ಪ್ರಕಾಶ ದುಂಡಣ್ಣನವರ, ಎಸ್​ಡಿಎಂಸಿ ಅಧ್ಯಕ್ಷ ಮಂಜಣ್ಣ ಗಾಜಿ, ಗಣಪತಿ ಜಾಧವ, ರಮೇಶ ಕಳಸೂರ, ಪ್ರವೀಣ ಹರಿಜನ, ಪಿಡಬ್ಲ್ಯುಡಿ ಎಇಇ ಪಿ.ಎಂ. ಶೆಟ್ಟಿಕೇರಿ, ಕಿರಿಯ ಇಂಜಿನಿಯರ್ ರಾಜಶೇಖರ ಹರಮಗಟ್ಟಿ, ಗುತ್ತಿಗೆದಾರ ವಿನಾಯಕ ಹತ್ತಿಕಾಳ, ಜಯಣ್ಣ ಮಡ್ಡಿ, ಸುಭಾಸ ದುಂಡಣ್ಣನವರ, ಕುಬೇರಪ್ಪ ಖಂಡೋಜಿ ಇದ್ದರು.

ದೇವೇಗೌಡರ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆರ್​ಐಡಿಎಫ್ ಯೋಜನೆಯ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾಮಗಾರಿಗಳಿಗೂ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಮೂಲ ಸೌಕರ್ಯಗಳಾದ ರಸ್ತೆ, ಶಾಲಾ ಕಟ್ಟಡ, ಸೇರಿ ಗ್ರಾಮೀಣಾಭಿವೃದ್ಧಿಗೂ ಹಣ ನೀಡುವ ಅಗತ್ಯತೆ ಕುರಿತು ಪ್ರಧಾನಿಗಳಿಗೂ-ಅಧಿಕಾರಿಗಳಿಗೂ ಮನವರಿಕೆ ಮಾಡಿದೆ. ಇದನ್ನು ಮನಗಂಡು ದೇವೇಗೌಡರು ಒಪ್ಪಿಗೆ ಸೂಚಿಸಿದ್ದರು. ಅಂದಿನಿಂದ ದೇಶದ ಎಲ್ಲ ರಾಜ್ಯಗಳಿಗೂ ಈ ಯೋಜನೆಯಿ ಗ್ರಾಮೀಣಾಭಿವೃದ್ಧಿಗೂ ಹಣ ಬಿಡುಗಡೆಗೊಳ್ಳಲಾರಂಭವಾಯಿತು. | ಸಿ.ಎಂ. ಉದಾಸಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net