

ಬೆಳಗಾವಿ: ಸಾಮಾಜಿಕ ಬದಲಾವಣೆಯಲ್ಲಿ ಮೂಲಸೌಲಭ್ಯಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದರಲ್ಲೂ ಕೃಷಿಯ ಜೀವಾಳ ಎನಿಸಿಕೊಂಡಿರುವ ನೀರಾವರಿ ಯೋಜನೆಗಳ ಅನುಷ್ಠಾನ ಆಯಾ ಕ್ಷೇತ್ರದ ಅಭಿವೃದ್ಧಿ ಚಿತ್ರಣವನ್ನೆ ಬದಲಾಯಿಸುವ ಶಕ್ತಿ ಹೊಂದಿರುವುದರಿಂದ ಉತ್ತರ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮುಖ್ಯಮಂತ್ರಿ ಸಿದ್ದರಾಯಮ್ಮ, ಡಿಸಿಎಂ, ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ತುರ್ತು ಕ್ರಮಕ್ಕೆ ಒತ್ತಾಯ: ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಉದ್ದೇಶದಿಂದಲೇ ಸ್ಥಾಪನೆಗೊಂಡಿರುವ ಸುವರ್ಣ ವಿಧಾನಸೌಧದ ಮೂಲ ಆಶಯ ಸಾಕಾರಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮಹಾಂತೇಶ ಕವಟಗಿಮಠ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಆಡಳಿತ ಮತ್ತು ವಿರೋಧಪಕ್ಷದ ನಾಯಕರನ್ನು ಭೇಟಿ ಮಾಡಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ಮತ್ತು ವಿಳಂಭ ಕಾಮಗಾರಿ ಕಾಣುತ್ತಿರುವ ನೀರಾವರಿ ಯೋಜನೆ ಮತ್ತು ಮೂಲಸೌಲಭ್ಯಗಳ ಅನುಷ್ಠಾನಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ: ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿಯ ಕಲ್ಲೋಳ-ಯಡೂರ ಬ್ಯಾರೇಜ್ ಮೇಲ್ಭಾಗದಲ್ಲಿ ದೂಧಗಂಗಾ ನದಿಯಿಂದ ನೀರೆತ್ತಿ ಸುಮಾರು 6,400 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಎರಡು ಹಂತದ ( ಮೊದಲನೇ ಹಂತ 203 ಕೋಟಿ ರೂ. ಮತ್ತು ಎರಡನೇ ಹಂತ 179.30 ಕೋಟಿ ರೂ.) ಒಟ್ಟು 382.30 ವೆಚ್ಚದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ, ಮೊದಲನೇ ಹಂತದಲ್ಲಿ 203 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 179.30 ಕೋಟಿ ರೂ. ಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿ ಗುತ್ತಿಗೆ ನೀಡಿ ಪ್ರಗತಿಯಲ್ಲಿದ್ದು, 2ನೇ ಹಂತದ ಕಾಮಗಾರಿಗೆ ನಡೆಯುತ್ತಿರುವ ಸಮೀಕ್ಷೆ ಕಾರ್ಯ ತ್ವರಿತಗೊಳಿಸಬೇಕು.
ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ: ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ 31 ಗ್ರಾಮಗಳಿಗೆ ಸುಮಾರು 11,600 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 520 ಕೋಟಿ ರೂ. ವೆಚ್ಚದ ಚನ್ನವಷಬೇಂದ್ರ ಏತ ನೀರಾವರಿ ಯೋಜನೆ ಕಾಮಗಾರಿಯನ್ನೂ ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 1 ನೇ ಹಂತದಲ್ಲಿ 200 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 320 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ.
ಕೆರೆಗಳಿಗೆ ನೀರು ತುಂಬುವ ಯೋಜನೆ: ಅರಬಾವಿ ಕ್ಷೇತ್ರ ವ್ಯಾಪ್ತಿಯ 20 ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ 323.87 ಕೋಟಿ ರೂ. ವೆಚ್ಚದ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ 192.30 ಕೋಟಿ ರೂ. ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ಪ್ರಗತಿಯಲ್ಲಿದೆ. 2ನೇ ಹಂತದ ಕಾಮಗಾರಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ.
ಸತ್ತಿಗೇರಿ ಏತ ನೀರಾವರಿ ಯೋಜನೆ: ಸವದತ್ತಿ ತಾಲೂಕಿನ 6,878 ಹೆಕ್ಟೇರ್ ಕ್ಷೇತ್ರಕ್ಕೆ ಘಟಪ್ರಭಾ ನದಿ ಪಾತ್ರದಿಂದ 0.98 ಟಿಎಂಸಿ ನೀರು ಎತ್ತಿ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವ 546 ಕೋಟಿ ರೂ.ಮೊತ್ತದ ಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲನೇ ಹಂತದಲ್ಲಿ 204.70 ಕೋಟಿ ರೂ. ಹಾಗೂ 2ನೇ ಹಂತದಲ್ಲಿ 341.30 ಕೋಟಿ ರೂ.ಖರ್ಚು ಮಾಡಲಾಗುತ್ತಿದ್ದು, ಗುತ್ತಿಗೆ ನೀಡಿರುವ ಮೊದಲನೇ ಹಂತದ ಕಾಮಗಾರಿ ಶೀಘ್ರ ಆರಂಭಿಸಬೇಕು.
ಕಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ದಿಗ್ಗೇವಾಡಿ ಬ್ಯಾರೇಜ್ ಕಾಮಗಾರಿ ಜತೆಗೆ ಕಲ್ಲೋಳ ಬ್ರಿಡ್ಜ್ ಕಮ್ ಬ್ಯಾರೇಜ್ ಕಾಮಗಾರಿಯೂ ಅಪೂರ್ಣಗೊಂಡಿವೆ. ಬಚಾವತ್ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟ್ ಆದೇಶದನ್ವಯ ಆಲಮಟ್ಟಿ ಜಲಾಶಯ ಎತ್ತರವನ್ನು 524 ಮೀಟರ್ ಹೆಚ್ಚಿಸುವುದರಿಂದ ಕಷ್ಣಾ ನದಿಯ ಹಿನ್ನೀರಿನಿಂದ ಮುಳುಗಡೆಯಾಗಲಿರುವ 20 ಗ್ರಾಮಗಳ ಜನರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಳಿಗೆ ತ್ವರಿತವಾಗಿ ಅನುದಾನ ನೀಡಬೇಕು.
ಚಿಕ್ಕೋಡಿ ತಾಲೂಕಿನ ಕರಗಾಂವ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ಕಲ್ಲೋಳ ಗ್ರಾಮದ ಹತ್ತಿರದ ಬ್ರಿಡ್ಜ್ ಕಮ್ ಬ್ಯಾರೇಜ್‌ದಿಂದ 0.77 ಟಿಎಂಸಿ ನೀರು ಬಳಸಿ ಚಿಕ್ಕೋಡಿ ತಾಲೂಕಿನ 14 ಗ್ರಾಮಗಳ ಸುಮಾರು 8390 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಬಹುದಾಗಿದೆ. ಕಾಗವಾಡ ತಾಲೂಕಿನ 23 ಕೆರೆ ತುಂಬಿಸುವ ಯೋಜನೆಯ 1ನೇ ಹಂತದ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆಲ್ಲಿರುವ 2ನೇ ಹಂತದ ಕಾಮಗಾರಿಯೂ ಶೀಘ್ರ ಆರಂಭಗೊಳ್ಳಬೇಕು. ಇದೇ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ಟಿ.ನಾರಾಯಣ ಸ್ವಾಮಿ ಅವರನ್ನೂ ಭೇಟಿ ಮಾಡಿ ಯೋಜನೆ ಅನುಷ್ಠಾನದಲ್ಲಿ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ಮಾಡಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಆರಂಭವಾಗಲಿ: ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ ಆರೋಗ್ಯ ರಕ್ಷಣೆ ಉದ್ದೇಶದಿಂದ ಬಿಮ್ಸ್ ಆವರಣದಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರ ಆರಂಭಿಸಬೇಕು. ಈಗಾಗಲೆ ಸರ್ಕಾರದ ಗಮನ ಸೆಳೆದರೂ ಕ್ರಮ ಕೈಗೊಳ್ಳದ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ ನೇಮಕಾತಿ ಜತೆಗೆ ವೈದ್ಯಕೀಯ ಉಪಕರಣಗಳನ್ನು ಪೂರೈಕೆಯಾಗಬೇಕಿದ್ದು, ಆದ್ಯತೆ ಮೇರೆಗೆ ಸದರಿ ಪ್ರಸ್ತಾವನೆ ಪರಿಶೀಲಿಸುವುದರ ಜತೆಗೆ ಮೈಸೂರು ಮಾದರಿಯಲ್ಲಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಬಂದಾವನವನ್ನು ಅಭಿವದ್ಧಿಪಡಿಸಲು ಅನುದಾನ ಒದಗಿಸಬೇಕು. ಖಾನಾಪುರ ತಾಲೂಕಿನಲ್ಲಿ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಅರಣ್ಯ ವಾಸಿಗಳಿಗೆ ತಕ್ಷಣ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ.