ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಡಿ

PH 02
Published on

ಚಿಂಚೋಳಿ: ಗರಗಪಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ನಡಿ ಸಿಲುಕಿರುವ ಮರದ ತುಂಡು ಹಾಗೂ ಮುಳ್ಳು-ಕಂಟಿಗಳನ್ನು ತೆರವುಗೊಳಿಸುವಂತೆ ಜಿಪಂ ಸಿಇಒ ಅವರು ತಾಕೀತು ಮಾಡಿದ್ದರು. ಆದರೆ ವಾರ ಕಳೆದರೂ ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ನಿರ್ಲಕ್ಷ್ಯ ವಹಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಎಂದು ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ತಹಸೀಲ್ದಾರ್‌ಗೆ ತಾಕೀತು ಮಾಡಿದರು.

ಗರಗಪಳ್ಳಿ- ಭಕ್ತಂಪಳ್ಳಿ ಸೇತುವೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಉನ್ನತ ಅಧಿಕಾರಿಗಳು ತಾಲೂಕಿಗೆ ಬಂದಾಗ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇದ್ಯಾವುದು ಗೊತ್ತಿಲ್ಲ ಅನಿಸುತ್ತದೆ. ಪ್ರತಿ ಬಾರಿಯೂ ಗೈರಾಗುತ್ತಿದ್ದಾರೆ. ಯಾವುದಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೂಡಲೇ ಎಲ್ಲ ಬ್ಯಾರೇಜ್‌ಗಳಡಿ ಸಿಲುಕಿರುವ ಮರದ ತುಂಡು, ಮುಳ್ಳು-ಕಂಟಿ ಸೇರಿ ಇನ್ನಿತರ ಕಸವನ್ನು ತೆರವುಗೊಳಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಶಿರೋಳ್ಳಿ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.

ತಹಸೀಲ್ದಾರ್ ವೀರೇಶ ಮುಳಗುಂದಿಮಠ, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ತಾಪಂ ಇಒ ಶಂಕರ ರಾಠೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಭದ್ರಶೆಟ್ಟಿ, ಲೋಕೋಪಯೋಗಿ ಅಭಿಯಂತರ ಬಸವರಾಜ ಬೆಣ್ಣೂರ, ಅಧಿಕಾರಿಗಳಾದ ಗುರುಪ್ರಸಾದ ಕವಿತಾಳ, ವೀರಶೆಟ್ಟಿ ರಾಠೋಡ್, ನಂದಕಿಶೋರ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net