

ಹನೂರು: ತಾಲೂಕಿನ ಅಂಬಿಕಾಪುರ ಗ್ರಾಮದ ಜಮೀನೊಂದಲ್ಲಿ ನೀರಾ ಕಟ್ಟಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಲು ಮುಂದಾದ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತ ಸಂಘಟನೆ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮದ ಮುತ್ತು ಅವರು ತಮ್ಮ ಜಮೀನಿನ ತೆಂಗಿನ ಮರದಲ್ಲಿ ನೀರಾ ಕಟ್ಟಿದ್ದರು. ಈ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಅಬಕಾರಿ ಅಧಿಕಾರಿಗಳು ಕೇಸ್ ದಾಖಲಿಸಲು ಮುಂದಾದರು. ಸುದ್ದಿ ತಿಳಿದು ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಹಾಗೂ ಉಪಾಧ್ಯಕ್ಷ ಪಳನಿಸ್ವಾಮಿ ಅವರು ಆಗಮಿಸಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಅಮ್ಜಾದ್‌ಖಾನ್ ಮಾತನಾಡಿ, ತಾಲೂಕಿನಾದ್ಯಂತ ಬಹುತೇಕ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಈಗ ರೈತನೊಬ್ಬ ನೀರಾ ಕಟ್ಟಿರುವುದಕ್ಕೆ ಕೇಸ್ ದಾಖಲಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಸುಮ್ಮನಿರದ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತೆರಳಿದ್ದು, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರೈತ ಸಂಘಟನೆ ಅಬಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.