

ಕಾರವಾರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಅಥವಾ ಕೊಳವೆಬಾವಿ ಕೊರೆಯುವುದು ಪರಿಹಾರವಲ್ಲ ಬದಲಾಗಿ ಮಳೆಕೊಯ್ಲು ಮಾಡಿ ತೆರೆದ ಬಾವಿಯಂತಹ ನೀರಿನ ಮೂಲಗಳನ್ನು ಸಂರಕ್ಷಿಸುವತ್ತ ಆದ್ಯತೆ ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ. ರೋಶನ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಂಗಳವಾರ ಹಮ್ಮಿಕೊಂಡ ವಾರ್ತಾ ಸ್ಪಂದನ - ನೇರ ಫೋನ್ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪೋನ್ ಕರೆಗಳಿಗೆ ಉತ್ತರಿಸಿ 14ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತಿಗಳಲ್ಲಿ ಹಣವಿದೆ.ಕುಡಿಯುವ ನೀರು ಸಮಸ್ಯೆ ಉಂಟಾದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆಗೆ ಆದ್ಯತೆ ಮೆರೆಗೆ ವ್ಯವಸ್ಥೆ ಮಾಡಲಾಗುವುದು. ಕೊಳವೆ ಬಾವಿಗಳನ್ನು ಕೊರೆಯುವಲ್ಲಿ ಆಸಕ್ತಿ ಇರುವದಿಲ್ಲ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗುದು. ಇದಕ್ಕೆ ಸಾರ್ವಜನಿಕರು ಕೂಡ ಸಲಹೆ ಸೂಚನೆಗಳನ್ನು ನೀಡಬೇಕೆಂದರು.
ಜಿಲ್ಲೆಯ ವಿವಿಧ ಭಾಗಗಳಿಂದ 20 ಕ್ಕೂ ಹೆಚ್ಚು ಪೋನ್ ಕರೆಗಳು ಬಂದವು. ಮುಖ್ಯವಾಗಿ ಮುಂಡಗೋಡ ತಾಲೂಕಿನ ಬಸಾಪುರದ ರಾಜೇಶ್ ಪಿ. ಅವರು ತಮ್ಮ ಗ್ರಾಮದ ರಸ್ತೆ ಸಮಸ್ಯೆ ಮತ್ತು ಎಸ್ಸಿಎಸ್ಟಿ ಅನುದಾನದಲ್ಲಿ ಇರುವ ನಿವೇಶನಗಳಿಗೆ ಪಂಚಾಯಿತಿಗಳಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಆನ್ಲೈನ್ನಲ್ಲಿ ತಾಂತ್ರಿಕ ದೋಷವಿರುವುದರಿಂದ ಅರ್ಜಿಗಳನ್ನು ಸ್ವಿಕರಿಸಲು ಸಾಧ್ಯವಾಗುತ್ತಿಲ್ಲ. ಎಸ್ಸಿಎಸ್ಟಿ ಅನುದಾನವಾಗಿರುವುದರಿಂದ ತಮಗೆ ಆದ್ಯತೆ ಮೆರೆಗೆ ಮನೆಯನ್ನು ಮಂಜೂರು ಮಾಡಲಾಗುವುದು ಜತೆಗೆ ರಸ್ತೆ ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.
ಕೆರವಡಿ ಗ್ರಾಮ ಪಂಚಾಯಿತಿಯಿಂದ ಕರೆ ಮಾಡಿದ ರೋಹಿತಾ ದೇವಿದಾಸ ಅವರು ಕೆರವಡಿಯಲ್ಲಿ ರಸ್ತೆ ಕಾಮಗಾರಿಗಾಗಿ ಪೈಪ್ ಲೈನ್ ತೆಗೆದಿದ್ದು, ಕುಡಿಯುವ ನೀರಿನ ಸಮ್ಯಸೆಯಾಗಿದೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಸಿಇಒ ಏಪ್ರಿಲ್, ಮೇ ಒಳಗೆ ರಸ್ತೆ ಮತ್ತು ಪೈಪ್ ಲೈನ್ ಕೆಲಸವನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದರು.
ಶಿರಸಿ ತಾಲೂಕಿನ ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವರಾಜ್ ಗೌಡ ಅವರು, ವದ್ದಲಾ ಗ್ರಾಮದಲ್ಲಿ ಹೊಸಗ್ರಾಮ ಪಂಚಾಯತಿಗಾಗಿ ಮನವಿಯನ್ನು ಮಾಡಿಕೊಳ್ಳುವುದರ ಜತೆಗೆ ಸಂತೋಳ್ಳಿ ಗ್ರಾಮದ ರುದ್ರಭೂಮಿಗೆ ರಸ್ತೆ ನಿರ್ಮಾಣ ಮಾಡಬೇಕು ಹಾಗೂ ಒಬ್ಬ ಕಾಯಂ ಪಿಡಿಒ ನಿಯೋಜಿಸಬೇಕೆಂದು ಕೇಳಿಕೊಂಡರು. ಇವರಿಗೆ ಉತ್ತರಿಸಿದ ಸಿಇಒ ಅವರು ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಅಂಕೋಲಾದ ಶ್ರೀಧರ ಗೌಡ, ಭಟ್ಕಳದ ಬುಡನಬಾಷಾ, ಉಳವಿ ಗ್ರಾಮದಿಂದ ರಾಜೇಶ ನಾಯ್ಕ, ಕುಮಟಾದ ಗಣೇಶ ನಾಯ್ಕ, ಚೆಂಡಿಯಾದಿಂದ ಕಾಶಿನಾಥ ನಾಯ್ಕ, ಮಿರ್ಜಾನಿಂದ ರಾಘವೇಂದ್ರ ಶಾನಭಾಗ, ಬದನಗೊಡದಿಂದ ಉದಯಗೌಡ, ವಸಂತ ಗೌಡ ಹಾಗೂ ನಾಗೇಶ ಕೆ., ಉಪಟಳೇಶ್ವರದಿಂದ ಅಚ್ಯುತ್ ಕುಮಾರ, ಗೋಕರ್ಣದಿಂದ ರಾಮಕೃಷ್ಣ ನಾಯ್ಕ ಹೀಗೆ ಹಲವರು ದೂರವಾಣಿ ಕರೆಮಾಡಿ ತಮ್ಮ ಸಮ್ಯಸೆಗಳನ್ನು ಸಿಇಒ ರೋಶನ್ ಅವರ ಮುಂದೆ ತೋಡಿಕೊಂಡರು.
ಜೀವಜಲ ಸಮಸ್ಯೆ ಪರಿಹಾರಕ್ಕೆ ವಿವಿಧ ಕ್ರಮ
ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಪಂ. ಸಿಇಒ ಎಂ ರೋಶನ್, ಇದು ಬೇಸಿಗೆ ಕಾಲವಾಗಿರುವುದರಿಂದ ನೀರಿನ ಸಮಸ್ಯೆ ಬಗೆಹರಿಸಲು ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕಾಗಿದೆ. ಸಾರ್ವಜನಿಕರ ಸಮ್ಯಸೆಗಳನ್ನು ಇಂತಹ ಫೋನ್ಇನ್ ಕಾರ್ಯಕ್ರಮದ ಮೂಲಕ ನೇರವಾಗಿ ಆಲಿಸಿದಾಗ ಯಾವ ಯಾವ ಸ್ಥಳಗಳಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮಾಡಬಹುದಾಗಿದೆ ಎಂದು ತಿಳಿಯಲು ಸಾಧ್ಯವಿದೆ. ಜೊತೆಗೆ ಪ್ರಮುಖವಾಗಿ ಕುಡಿಯುವ ನೀರಿನ ಕುರಿತಾಗಿ ಹೆಚ್ಚಿನ ಗಮನವನ್ನು ನೀಡಿ, ಈ ಯೋಜನೆಗಳಿಗೆ ನೀಡುವ ಹಣವನ್ನು ಸದುಪಯೋಗ ಮಾಡುವುದು ಪ್ರಮಖವಾದ ಉದ್ದೇಶವಾಗಿದೆ ಎಂದು ತಿಳಿಸಿದರು.