

ಹಾಸನ : ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ರಾಜ್ಯಾದ್ಯಂತ ಜಾರಿಯಲ್ಲಿದೆ. ಎಲ್ಲ ಕಡೆ ಇರುವ ಪಕ್ಷಗಳ ಪೋಸ್ಟರ್, ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ನಗರದಲ್ಲಿ ಇನ್ನು ಅನೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಪಕ್ಷಗಳ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ನಗರದ ರಕ್ಷಣಾಪುರಂ ಹತ್ತಿರ ಶ್ರೀ ಗಂಧದ ಕೋಠಿ ಅವರಣದಲ್ಲಿ ಇರುವ ಸರ್ಕಾರಿ ಮಹಿಳಾ ಪ್ರಧಾನ ಮತ್ತು ವಿಭಜಿತ ಶಾಲಾ-ಕಾಲೇಜು ಎದುರು ರಸ್ತೆ ಬಳಿ ಇರುವ ಗೋಡೆಯೊಂದರಲ್ಲಿ ಬಿಜೆಪಿ ಕೇಂದ್ರದ ಮುಖಂಡರು ಹಾಗೂ ರಾಜ್ಯ ಮುಖಂಡರ ಪೋಟೋ ಹಾಗೂ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯುವ ಪ್ರಣಾಳಿಕೆಯ ಬರಹಗಳ ಪೋಸ್ಟರ್‌ಗಳು ಕಂಡು ಬಂದಿವೆ.
ಮಾ. 29ರಿಂದಲೇ ರಾಜ್ಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಪಕ್ಷಗಳ ಪೋಸ್ಟರ್ ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಎರಡು ವಾರಗಳು ಕಳೆಯುತ್ತಾ ಬಂದರೂ ಇನ್ನೂ ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇನ್ನು ಅನೇಕ ಭಾಗಗಳಲ್ಲಿ ವಿವಿಧ ಪಕ್ಷಗಳ ಪೋಸ್ಟರ್‌ಗಳು ಇರುವ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಮಾತುಗಳು ಕೇಳಿ ಬಂದಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.