

ಹುಬ್ಬಳ್ಳಿ: ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಅಡ್ಡಿಯಾಗುವ ನೀತಿಯ ನಿರ್ಬಂಧಗಳನ್ನು ಆಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗಳು ಪ್ರಮುಖವಾಗಿ ಗುರುತಿಸಬೇಕು ಎಂದು ಬಿಜಿನೆಸ್ ಗ್ರೌತ್ ಕನ್ಸಲ್ಟಂಟ್ ಡಾ. ಅಶೋಕ ಕೊರವರ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ 10ಎಕ್ಸ್ ಬಿಜಿನೆಸ್ ಗ್ರೌತ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಐಐಟಿ ಪದವೀಧರರನ್ನು ಹಾಗೂ ಭಾರತೀಯರನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ, ಕೆಲಸಕ್ಕೆ ರಾಜೀನಾಮೆ ಕೊಡುವವರು 3 ತಿಂಗಳು ನೋಟಿಸ್ ಅವಧಿಗೆ ಒಳಪಡಬೇಕು, ಎಂಬಿತ್ಯಾದಿ ನೀತಿಯ ನಿರ್ಬಂಧಗಳು ಕಂಪನಿಗಳಲ್ಲಿ ಇರುತ್ತವೆ. ಇವುಗಳು ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುತ್ತವೆಯೇ ಎಂಬುದನ್ನು ಸಿಇಒ ಗುರುತಿಸಬೇಕು ಎಂದರು.
ಮಹಿಳೆಯರಿಂದ ಉದ್ಯಮ ನಡೆಸಲು ಸಾಧ್ಯವೇ ಇಲ್ಲ, ಹೊರ ದೇಶದಲ್ಲಿ ವ್ಯವಹಾರ ವಿಸ್ತರಣೆ ಮಾಡುವುದು ಕಷ್ಟಕರ, ಉನ್ನತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಾಗ ಸಂಬಳದ ಇತಿಮಿತಿ, ಇತ್ಯಾದಿ ಮನಸ್ಥಿತಿಯ ನಿರ್ಬಂಧಗಳು ಉದ್ಯಮವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಸಿಇಒಗಳು ಜ್ಞಾನ ಮತ್ತು ಸಾಮಾನ್ಯ ತಿಳಿವಳಿಕೆಯನ್ನು ಬಳಕೆ ಮಾಡಬೇಕು ಎಂದು ಹೇಳಿದರು.
ಟೆಕ್ ಮಹೀಂದ್ರ ಮಾಜಿ ಸಿಇಒ ಕಿರಣ ದೇಶಪಾಂಡೆ ಮಾತನಾಡಿ, ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ಟಿಪಿಐ) ಅಸ್ತಿತ್ವಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಐಟಿ ಕಂಪನಿಗಳ ಬೆಳವಣಿಗೆಗೆ ವರದಾನವಾಯಿತು. ಟಿಸಿಎಸ್, ಇನ್ಪೋಸಿಸ್, ವಿಪ್ರೋ ಜತೆ ಟೆಕ್ ಮಹೀಂದ್ರ ಸಹ ಉತ್ತಮ ಬೆಳವಣಿಗೆಯನ್ನು ಕಂಡಿತು ಎಂದು ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿಯ ಚೇರ್ಮನ್ ಶಶಿಧರ ಶೆಟ್ಟರ್ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರವೀಣ ಅಗಡಿ ವಂದಿಸಿದರು. ಸಂದೀಪ ಬಿಡಸಾರಿಯಾ, ಇತರರು ಇದ್ದರು.