ನೀತಿ ಸಂಹಿತೆಗೆ ಮುನ್ನವೇ ಗುರಿ ಸಾಧಿಸಿ

CTD 28 NEWS DC--003
Published on

ಚಿತ್ರದುರ್ಗ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನವೆ ಎಲ್ಲ ಇಲಾಖೆಗಳ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಸಂಪೂರ್ಣ ಬಳಕೆಯೊಂದಿಗೆ ಶೇ.100ರಷ್ಟು ಗುರಿ ಸಾಧಿಸುವಂತೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ನವೆಂಬರ್ ಅಂತ್ಯದವರೆಗಿನ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನೀತಿ ಸಂಹಿತೆ ಜಾರಿ ಪೂರ್ವದಲ್ಲಿ ಪ್ರಗತಿ ಸಾಧಿಸಲು 15 ದಿನದೊಳಗೆ ಕ್ರಿಯಾಯೋಜನೆ ಸಿದ್ಧಪಡಿಸುವುದರೊಂದಿಗೆ ಎಲ್ಲ ಇಲಾಖೆಗಳು ಫೆಬ್ರವರಿ ಅಂತ್ಯದ ವೇಳೆಗೆ ಶೇ.100 ಆರ್ಥಿಕ ಪ್ರಗತಿ ಸಾಧಿಸಬೇಕು. ಲೋಕಸಭೆ, ವಿಧಾನಪರಿಷತ್, ಪಂಚಾಯತ್ ಚುನಾವಣೆ ಮಾದರಿ ನೀತಿ ಸಂಹಿತೆಗಳು ಜಾರಿ ಬಳಿಕ ಹೊಸ ಯೋಜನೆಗಳಿಗೆ ಅನುಮೋದನೆ ಅಸಾಧ್ಯವಾಗಲಿದೆ ಎಂದರು.
ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಕುಡಿಯುವ ನೀರು, ಸೋಲಾರ್ ವಾಟರ್ ಹೀಟರ್ ಸೇರಿ ಇತರ ಅಗತ್ಯ ಮೂಲ ಸೌಕರ್ಯಗಳನ್ನು ಅಳವಡಿಸಲು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆಗೆ ಆದ್ಯತೆ ನೀಡಬೇಕು. ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂಗಳಿಂದ ವಿದ್ಯಾರ್ಥಿಗಳ ನಿಲಯಗಳಿಗೆ ನೀರಿನ ಸಂಪರ್ಕ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಿಂಗಳ ಅಂತ್ಯದ ವೇಳೆಗೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಪಟ್ಟಿ ಕಳುಹಿಸಬೇಕು. ವಿವಿಧ ನಿಗಮಗಳ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಶಾಸಕರ ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆಗೆ ಇಲಾಖೆ ಹಾಗೂ ನಿಗಮಗಳ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
37 ಇಲಾಖೆಗಳ ಪ್ರಗತಿಯನ್ನು ಡಿಸಿ ಇದೇ ವೇಳೆ ಪರಿಶೀಲನೆ ನಡೆಸಿದರು. ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಒ.ಪರಮೇಶ್ವರಪ್ಪ ಮತ್ತಿತರ ಅಧಿಕಾರಿಗಳಿದ್ದರು.

*ಕೋಟ್
ಜಿಲ್ಲೆಯ ವಿವಿಧ ಇಲಾಖೆ, ಅಭಿವೃದ್ಧಿ ನಿಗಮಗಳಿಂದ ಎಸ್‌ಸಿಎಸ್‌ಪಿ ಅಡಿ 144.15 ಕೋಟಿ ರೂ. ಹಾಗೂ ಟಿಎಸ್‌ಪಿ ಅಡಿ 102.78 ಕೋಟಿ ರೂ. ಅನುದಾನದಲ್ಲಿ ಶೇ.92 ಪ್ರಗತಿ ಸಾಧಿಸಲಾಗಿದೆ.
ಜಗದೀಶ್ ಹೆಬ್ಬಳ್ಳಿ, ಉಪನಿರ್ದೇಶಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net