ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

gp election
Published on

ಬೀದರ್: ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗ ಜಾರಿಗೊಳಿಸಿರುವ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಖಡಕ್ ಸೂಚನೆ ನೀಡಿದ್ದಾರೆ.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ(ಆರ್ ಒ) ಮತ್ತು ಸಹಾಯಕ ಚುನಾವಣಾ ಅಧಿಕಾರಿ(ಎಆರ್ ಒ) ಗಳಿಗೆ ಇಲ್ಲಿನ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಈ ದಿಸೆಯಲ್ಲಿ ಎಲ್ಲರೂ ತಮಗೊಪ್ಪಿಸಿರುವ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಯಾವುದೇ ದೂರುಗಳಿಗೆ ಆಸ್ಪದ ನೀಡಬಾರದು ಎಂದು ನಿರ್ದೇಶನ ನೀಡಿದರು.

ಬೀದರ್ ಜಿಲ್ಲೆಯಲ್ಲಿ ಈ ಬಾರಿಯೂ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಗಳನ್ನು ಬಳಸುತ್ತಿರುವುದು ವಿಶೇಷ. ಇಡೀ ರಾಜ್ಯದಲ್ಲೇ ಇಲ್ಲಿ ಮಾತ್ರ ಇವಿಎಂ ಬಳಕೆ ಮಾಡಲಾಗುತ್ತಿದೆ. ಈ ಯಂತ್ರಗಳನ್ನು ಹೇಗೆ ಬಳಸಬೇಕು. ಒಂದೇ ವಾಡ್೯ನಲ್ಲಿ ಬಹು ಸದಸ್ಯರಿದ್ದರೂ ಯಾವ ರೀತಿ ಮತದಾನ ಮಾಡಬೇಕು ಎಂಬಿತ್ಯಾದಿ ಕುರಿತು ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಡೀ ಚುನಾವಣೆ ಪ್ರಕ್ರಿಯೆ ಸುಗಮ, ಶಾಂತ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲರೂ ಶ್ರಮಿಸಬೇಕು. ಎಲ್ಲ ಅಧಿಕಾರಿ, ನೌಕರರು ಪರಸ್ಪರ ಸಮನ್ವಯತೆ ಹೊಂದಿರಬೇಕು. ಎಲ್ಲರೂ ತಮಗೊಪ್ಪಿಸಿರುವ ಜಿಮ್ಮೇದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದರೆ ಯಾವುದೇ ಸಮಸ್ಯೆ ಬರಲಾರವು ಎಂದು ಹೇಳಿದರು.

ಮಾಸ್ಟರ್ ಟ್ರೇನರ್ ಡಾ. ಗೌತಮ ಅರಳಿ ಅವರು, ಚುನಾವಣಾ ಕಾರ್ಯ ಹೇಗೆ ಮಾಡಬೇಕು? ನಾಮಪತ್ರಗಳನ್ನು ಯಾವ ರೀತಿ ಪಡೆದುಕೊಳ್ಳಬೇಕೆನ್ನುವ ಕುರಿತು ಸಮಗ್ರ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ್, ಎಲ್ಲ ತಾಲೂಕುಗಳ ತಹಸೀಲ್ದಾರರು, ಚುನಾವಣಾ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.

201 ಆರ್ ಒ, 211 ಎಆರ್ ಒ
ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನು ಚುನಾವಣಾ ಅಧಿಕಾರಿ ಎಂದು ಹಾಗೂ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಳನ್ನು ಸಹಾಯಕ ಚುನಾವಣಾ ಅಧಿಕಾರಿ ಎಂದು ಕರ್ತವ್ಯಕ್ಕೆ ನೇಮಿಸಲಾಗಿದೆ. ಜಿಲ್ಲಾದ್ಯಂತ ಚುನಾವಣೆಗೆ 201 ಆರ್ ಒ, 211 ಎಆರ್ ಒ ಗಳನ್ನು ಈ ತರಬೇತಿಗೆ ನಿಯೋಜಿಸಲಾಗಿತ್ತು.

ಡಿ.7ರಂದು ಮೊದಲ
ಹಂತದ ಅಧಿಸೂಚನೆ

ಡಿ.22 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿ ರಾಮಚಂದ್ರನ್ ಅವರು ಡಿ.7ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ ಅಖಾಡಕ್ಕಿಳಿಯಬಯಸುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆಗೆ ಬೇಕಾದ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸುವ ಸಿದ್ಧತೆ ಆರಂಭಿಸಿದ್ದಾರೆ. ನಾಮಪತ್ರದ ಜತೆಗೆ ಜಾತಿ ಪ್ರಮಾಣಪತ್ರ ಸಲ್ಲಿಸುವುದು ಮುಖ್ಯವಾಗಿದೆ. ಸಾಮಾನ್ಯ ಹೊರತುಪಡಿಸಿದರೆ ಮೀಸಲು ಕ್ಷೇತ್ರಗಳಲ್ಲಿ ಜಾತಿ ಪ್ರಮಾಣಪತ್ರವೇ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಆಕಾಂಕ್ಷಿಗಳು ಜಾತಿ ಪ್ರಮಾಣಪತ್ರ ಪಡೆಯುವುದಕ್ಕೆ ಕಂದಾಯ ಕಚೇರಿ ಸುತ್ತಾಟ ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಾರಂಭದಿಂದ ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ ಆಗುವವರೆಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈ ವಿಷಯದಲ್ಲಿ ಉದಾಸೀನ, ನಿರ್ಲಕ್ಷೃ ಧೋರಣೆ ಸಹಿಸಲಾಗದು.| ಆರ್. ರಾಮಚಂದ್ರನ್,ಡಿಸಿ ಮತ್ತು ಜಿಲ್ಲಾ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net