

ಮೈಸೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡು ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್, ವಿಚಕ್ಷಣ ದಳದ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗಂತೆ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ತೆರೆದಿರುವ ಚೆಕ್ ಪೋಸ್ಟ್‌ಗಳಲ್ಲಿ ಸೂಕ್ಷ್ಮವಾಗಿ ವಾಹನ ತಪಾಸಣೆ ಮಾಡಬೇಕು. ತಪಾಸಣೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ತಿಳಿಸಿದರು.
ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ, ಜಿಪಂ ಸಿಇಒ ಕೆ.ಎಂ ಗಾಯತ್ರಿ ಮಾತನಾಡಿ, ಯಾವುದೇ ಗೊಂದಲಗಳಿದ್ದರೆ ರಿಟರ್ನಿಂಗ್ ಆಫೀಸರ್‌ಗಳ ಹತ್ತಿರ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು
ಚರ್ಚ್, ಮಸೀದಿ ಹಾಗೂ ದೇವಸ್ಥಾನಗಳ ಮುಂದೆ ಯಾವುದೇ ರೀತಿ ಪ್ರಚಾರ ಮಾಡುವಂತಿಲ್ಲ. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮೆರವಣಿಗೆಗೆ, ಸಭೆ ಸಮಾರಂಭಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ವಿಡಿಯೋ ವ್ಯಾನ್‌ಗಳಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ಅನುಮತಿ ಪಡೆದಿರಬೇಕು. ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚೆ ಬಹಿರಂಗ ಪ್ರಚಾರಗಳು ಅಂತ್ಯವಾಗಬೇಕು. ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಮತ್ತು ಪ್ರಾಣಿಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಮಾತನಾಡಿ, ಚುನಾವಣೆ ಕರ್ತವ್ಯದಲ್ಲಿ ಯಾವುದೇ ಲೋಪಗಳು ಆಗಬಾರದು. ನಾವು ಮಾಡುವ ಕೆಲಸದಲ್ಲಿ ಅರಿವು ಇಲ್ಲದೆ ಇದ್ದಾಗ ಲೋಪಗಳು ಉಂಟಾಗುತ್ತವೆ. ಆದ್ದರಿಂದ ಈ ತರಬೇತಿ ನೀಡಲಾಗುತ್ತಿದೆ ಎಂದರು
ಈ ಹಿಂದೆ ಅಸಂಖ್ಯಾತ ಬ್ಯಾನರ್‌ಗಳು, ಮೈಕ್‌ಗಳಲ್ಲಿ ಪ್ರಚಾರ ಹೆಚ್ಚಾಗಿ ಇರುತ್ತಿತ್ತು, ಆದರೆ, ಈಗ ಎಲ್ಲವೂ ನಿಯಮಬದ್ಧವಾಗಿ ಅನುಮತಿ ಪಡೆದುಕೊಂಡು ಮಾಡಬೇಕು. ಎಫ್‌ಎಸ್‌ಟಿ ತಂಡದವರಿಗೆ ತಮ್ಮ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಸೂಚಿಸಿದರು.
ಯಾವುದೇ ಅಧಿಕಾರಿಗಳು ಮತ್ತು ಪಕ್ಷಗಳು ವೈಯಕ್ತಿಕ ಟೀಕೆ ಮಾಡುವಂತಿಲ್ಲ. ಯಾವುದೇ ಸರ್ಕಾರಿ ಕಚೇರಿ ಕಾಂಪೌಂಡ್‌ಗಳ ಮೇಲೆ ಪೋಸ್ಟರ್, ಬ್ಯಾನರ್ ಅಂಟಿಸುವಂತಿಲ್ಲ. ಬಹಿರಂಗ ಸಭೆ, ಸಮಾರಂಭಗಳ ವಿಡಿಯೋ ರೆಕಾರ್ಡಿಂಗ್ ಆಗಬೇಕು. ಬೈಕ್ , ಕಾರು ರ‌್ಯಾಲಿಗಳಿಗೆ ಬೈಕ್ ಹಾಗೂ ಕಾರ್‌ಗಳ ನೋಂದಣಿ ಸಂಖ್ಯೆ ಸಮೇತ ಅನುಮತಿ ಪಡೆದಿರಬೇಕು. ಬೇರೆ ವಾಹನ ಬಳಸಲು ಅವಕಾಶ ಇರುವುದಿಲ್ಲ. ಪೋಸ್ಟರ್, ಕರಪತ್ರಗಳಲ್ಲಿ ಪ್ರಿಂಟರ್ಸ್ ಮತ್ತು ಪಬ್ಲಿಕೇಷನ್ಸ್ ಹೆಸರು, ವಿಳಾಸ, ಹಾಗೂ ಪ್ರತಿಗಳ ಸಂಖ್ಯೆ ಮುದ್ರಣ ಕಡ್ಡಾಯವಾಗಿರಬೇಕು. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಚುನಾವಣೆ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು. ಡಿಸಿಪಿ ಮುತ್ತುರಾಜ್, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ತಂಬಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.