ನೀತಿ ಸಂಹಿತೆ ಉಲ್ಲಂಘನೆಯಾಗದಿರಲಿ

Screenshot_20230325_162139
Published on

ಹೊಳೆನರಸೀಪುರ: ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಪೊಲೀಸ್ ಇಲಾಖೆ ಜತೆಗೆ ಗೃಹರಕ್ಷಕ ದಳದ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಪ್ರವೀಣ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಹಾಸನ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಮತದಾರರಾಗಲಿ ಚುನಾವಣಾ ನೀತಿ ಜಾರಿಗೆ ಬಂದ ದಿನದಿಂದ ಯಾರೂ ಅದನ್ನು ಮೀರಬಾರದು. ಕಾನೂನು ಬಾಹಿರ ಚಟುವಟಿಕೆ ನಡೆಸುವುದು ಕಂಡುಬಂದರೆ ಚುನಾವಣಾ ಆಯೋಗ ಪರಿಶೀಲಿಸಿ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲು ಮುಂದಾಗುತ್ತದೆ ಎಂದರು.

ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ತಿಳಿದ ತಕ್ಷಣ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿ ತಕ್ಷಣ ಫೋಟೋ, ವಿಡಿಯೋ ಚಿತ್ರೀಕರಿಸಿ ಚುನಾವಣಾ ಅಧಿಕಾರಿಗಳಿಗೆ ಹಸ್ತಾಂತರ ಮಾಡುವುದು ಒಳ್ಳೆಯದು. ಪೊಲೀಸ್ ಇಲಾಖೆ ಚೆಕ್ ಪೋಸ್ಟ್‌ಗಳಲ್ಲಿ ಅತ್ಯಂತ ಜಾಗೃತರಾಗಿ ಕೆಲಸ ನಿರ್ವಹಿಸುವುದು ಅತ್ಯವಶ್ಯಕ. ಚುನಾವಣಾ ಕೊಠಡಿಗೆ ಐಡಿ ಕಾರ್ಡ್ ಇಲ್ಲದೆ ಯಾವುದೇ ಕಾರಣಕ್ಕೂ ಅಭ್ಯರ್ಥಿ ಹಾಗೂ ಏಜೆಂಟರ ಹೊರತುಪಡಿಸಿ ಮತಗಟ್ಟೆಗೆ ಬಿಡಬಾರದು ಎಂದು ತಿಳಿವಳಿಕೆ ನೀಡಿದರು.

ಹಾಸನ ಜಿಲ್ಲಾ ಗೃಹರಕ್ಷಕ ದಳದ ಸಮಾಧೇಷ್ಟರಾದ ಎಚ್.ಎಲ್. ಧರ್ಮೇಂದ್ರ ಮಾತನಾಡಿದರು. ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕರಾದ ಕೆ.ಬಿ. ಯೋಗೇಶ್, ಸಹಾಯಕ ಬೋಧಕರಾದ ಹಾಜೀರ ಖಾನಂ, ಸೀನಿಯರ್ ಪ್ಲಟೂನ್ ಕಮಾಂಡರ್ ಎಚ್.ಆರ್. ಪ್ರದೀಪ್ ಕುಮಾರ್, ಹಳ್ಳಿ ಮೈಸೂರು ಘಟಕ ಅಧಿಕಾರಿ ಎಚ್.ಎ. ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net