

ಚಾಮರಾಜನಗರ: ಇಂದು ಕೃಷಿಯ ಕಷ್ಟ-ನಷ್ಟಗಳನ್ನು ಕಣ್ಣಾರೆ ಕಾಣುತ್ತಿರುವ ರೈತರ ಮಕ್ಕಳು ರೈತರಾಗಲು ಇಷ್ಟ ಪಡುತ್ತಿಲ್ಲ. ಆದರೆ ಅಂದು ಸರ್ಕಾರಿ ಅಧಿಕಾರಿಯ ಮಗ ರೈತನಾದರು. ಅನ್ಯರಿಗೆ ನೀತಿ ಹೇಳುವ ಸ್ಥಾನದಲ್ಲಿದ್ದ ತಂದೆಗೆ ಗೌರವ ತಂದುಕೊಡುವಂತಾ ಮಾದರಿ ತೋಟಗಾರನಾಗಿದ್ದಾರೆ.
ತಾಲೂಕಿನ ಪಣ್ಯದಹುಂಡಿ ಗ್ರಾಮದ ನಿವಾಸಿ, ರಾಜ್ಯ ತೋಟಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ಎಲ್.ಹನುಮಯ್ಯ ಅವರ ಪುತ್ರ ಎಚ್.ದೊರೆರಾಜು ತೋಟಗಾರಿಕೆ ಕೃಷಿಯನ್ನು ಇತರರೂ ಅನುಸರಿಸುವಂತೆ ಮಾಡುತ್ತಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದಿರುವ 22 ಎಕರೆ ಜಮೀನು ಪಣ್ಯದಹುಂಡಿಯಿಂದ ಹೆಗ್ಗೋಠಾರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿದೆ. ಇದೇ ಇವರ ಕಾಯಕ ಭೂಮಿ. ಬಟರ್‌ರ್ೂಟ್ ಸೇರಿದಂತೆ ಬಗೆ ಬಗೆಯ ಹಣ್ಣಿನ ಗಿಡಗಳನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದಿರುವ ಪ್ರಯೋಗಶಾಲೆ.
ಸುಮಾರು 68 ವರ್ಷ ವಯಸ್ಸಿನ ಎಚ್.ದೊರೆರಾಜು ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. 1978ರಲ್ಲಿ ಬೆಂಗಳೂರಿನ ಕಾರ್ಪೋರೇಷನ್‌ನಲ್ಲಿ ಉದ್ಯೋಗಕ್ಕೆ ಸೇರಿದ್ದವರು. ಆದರೆ ಈ ಕೆಲಸ ಬಿಟ್ಟು ಊರಲ್ಲಿ ಕೃಷಿ ಮಾಡಲು ಬಂದುಬಿಟ್ಟರು. ಅದಾಗಲೇ ಜಮೀನಿನಲ್ಲಿ ತಂದೆ ಎಲ್.ಹನುಮಯ್ಯ ಮಾಡಿಸುತ್ತಿದ್ದ ತೋಟಗಾರಿಕೆ ಕೃಷಿಯನ್ನು ಮಾಡಿಸುತ್ತಿದ್ದರು. ಇದನ್ನೇ ನೋಡಿಕೊಳ್ಳಲು ಶುರು ಮಾಡಿದ ದೊರೆರಾಜು ಹಣ್ಣಿನ ಗಿಡಗಳಿಗೆ ರಾಸಾಯನಿಕ ಗೊಬ್ಬರವನ್ನು ಹಾಕಿದ್ದರು. ಒಂದು ದಿನ ತೋಟಕ್ಕೆ ಬಂದ ತಂದೆ ಎಲ್.ಹನುಮಯ್ಯ ಇದನ್ನು ಕಂಡು ಪುತ್ರ ದೊರೆಸ್ವಾಮಿ ಅವರನ್ನು ಬೆಂಗಳೂರಿಗೆ ವಾಪಸ್ ಕರೆಸಿಕೊಂಡರು.
ತೋಟಗಾರಿಕೆ ಇಲಾಖೆ ನಿರ್ದೇಶಕನಾಗಿ ಬೇರೆ ರೈತರಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬಾರದೆಂದು ಹೇಳಬೇಕಿರುವಾಗ ನಮ್ಮ ತೋಟದಲ್ಲೇ ಈ ರೀತಿ ಮಾಡುವುದು ಸರಿಯಲ್ಲ. ನೀನು ಕೃಷಿ ಬಿಟ್ಟು ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡಿರು ಎಂದು ಬಿಟ್ಟರು. ಅಂದು ತಂದೆಯ ಬಳಿ ಕ್ಷಮೆ ಕೇಳಿ ಸಾವಯವ ಪದ್ದತಿ ಅನುಸರಿಸಲು ಮಾಡಲು ಶುರು ಮಾಡಿದರು. ಇಳಿವಯಸ್ಸಿನ ಎಲ್.ಹನುಮಯ್ಯ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ದೊರೆರಾಜು 68 ವರ್ಷ ವಯಸ್ಸಿನಲ್ಲೂ ತಂದೆಯ ಸೂಚನೆಯಂತೆಯೇ ತೋಟಗಾರಿಕೆ ಮಾಡುತ್ತಿದ್ದಾರೆ.
ಚಂದದ ತೋಟ, ಕೃಷಿಯ ನೋಟ:
ರೈತ ದೊರೆರಾಜು ಅವರ ತೋಟ ಸುದೀರ್ಘ ಕೃಷಿಯ ನೋಟಕ್ಕೆ ಸಾಕ್ಷಿಯಾಗಿದೆ. 1968ರಲ್ಲಿ ಇವರ ನೆಡಿಸಿದ 500 ತೆಂಗು, 400 ಸಪೋಟ ಮರಗಳು ಈಗಲೂ ಲ ಕೊಡುತ್ತಿವೆ. ಇವುಗಳ ಜತೆಗೆ ಸೀಬೆಯೂ ಇತ್ತು. ಆಗ ಈ ತೋಟವನ್ನು ಸೀಬೆ ತೋಟ ಎಂದೇ ಕರೆಯುತ್ತಿದ್ದರು. ಆದರೆ ಈಗ ಅವು ಇಲ್ಲ. ಬದಲಿಗೆ 100 ಬಟರ್‌ರ್ೂಟ್ ಗಿಡಗಳಿವೆ. 100 ನೇರಳೆ, 10 ಹಲಸು, 100 ಮಾವು, 4 ಸೀತಾಲ, 4 ರಾಮಲ, 1 ಚಕ್ಕೆ ಗಿಡ, 10 ಇಟಾಲಿಯನ್ ಲೆಮನ್, ನುಗ್ಗೆ ಇನ್ನಿತರೆ ಹಣ್ಣಿನ ಗಿಡಗಳು ಸೊಂಪಾಗಿ ಬೆಳೆದಿವೆ. ಇವುಗಳಲ್ಲೆಲ್ಲಾ ವಿವಿಧ ತಳಿಯ ಗಿಡಗಳಿರುವುದು ವಿಶೇಷ. ಉದಾರಣೆಗೆ 100 ಮಾವಿನ ಬೆಳೆಗಳಲ್ಲಿ ಬಾದಾಮಿ, ರಸಬೂರಿ, ಮಲ್ಲಿಕಾ,ಮಲಗೋಬ ಹೀಗೆ ಬೇರೆ ಬೇರೆ ತಳಿಗಳಿವೆ. ಇವುಗಳನ್ನೆಲ್ಲಾ ತೋಟದಲ್ಲೇ ಕಸಿ ಮಾಡಿ ವಿಭಿನ್ನ ಕೃಷಿ ಮಾಡಲಾಗುತ್ತಿದೆ. ಬೇರೆ ರೈತರಿಗೆ ಸಸಿಗಳನ್ನೂ ಸಹ ಮಾರಾಟ ಮಾಡುತ್ತಿದ್ದಾರೆ. ಕಸಿಯಾದ ಗಿಡ, ಮರಗಳು ಉತ್ತಮವಾಗಿ ಬೆಳೆದು ನಿಂತಿರುವುದನ್ನು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ.
ಬೆಣ್ಣೆ ಹಣ್ಣಿನ ಘಮಲು:
ತೋಟದಲ್ಲಿರುವ ಸಪೋಟ, ಮಾವಿನ ಮರಗಳ ನಡುವೆ ಬೆಣ್ಣೆ ಹಣ್ಣು(ಬಟರ್‌ರ್ೂಟ್) ಘಮಲೂ ಇದೆ. ಶ್ರೀಲಂಕಾದಿಂದ ಈ ಹಣ್ಣನ್ನು ಪರಿಚಯಿಸಲಾಯಿತು ಎನ್ನಲಾಗುತ್ತದೆ. ತಮಿಳುನಾಡು ಮತ್ತು ಕೇರಳ, ತೆಲಂಗಾಣ, ಕರ್ನಾಟಕದ ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.ಚಾಮರಾಜನಗರದಲ್ಲೂ ಬಟರ್‌ರ್ೂಟ್ ಬೆಳೆಯಬಹುದು ಎಂದು ತೋರಿಸಿಕೊಟ್ಟಿರುವ ರೈತರಲ್ಲಿ ದೊರೆರಾಜು ಒಬ್ಬರು.
ಕಳೆದ 4 ವರ್ಷಗಳ ಹಿಂದೆ ಬಟರ್‌ರ್ೂಟ್ ಗಿಡಗಳನ್ನು ಹಾಕಿ ಹಣ್ಣುಗಳನ್ನು ಜ್ಯೂಸ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಕಾಯಿ ಬಿಟ್ಟಿರುವ ಗಿಡಗಳಲ್ಲಿ ಬಟರ್‌ರ್ೂಟ್ ನಳನಳಿಸುತ್ತಿವೆ. ತೋಟದಲ್ಲಿ ಇದೊಂದೇ ಹಣ್ಣು ಮಾತ್ರವಲ್ಲ, ಮಾವಿನ ಕಾಯಿ, ನೇರಳೆ, ಹಲಸು, ಸಪೋಟ ಕಾಯಿ ಕಚ್ಚಿವೆ. ಹೂಬಿಟ್ಟ ಗಿಡಗಳು ಕಾಣಸಿಗುತ್ತಿವೆ. ಎಲ್ಲಿ ನೋಡಿದರೂ ಕಾಣುವ ಸಪೋಟ ಗಿಡಗಳಲ್ಲಿ ಹಣ್ಣುಗಳು ಜೋತು ಹಾಕಿಕೊಂಡಿವೆ. ಇಟಾಲಿಯನ್ ನಿಂಬೆ ಗಜಗಾತ್ರದಲ್ಲಿ ಅರಳಿವೆ. ಅಲ್ಲಲ್ಲಿ ಮೆಣಸಿನ ಗಿಡಗಳ ಬಳ್ಳಿ ತೆಂಗಿನ ಮರವನ್ನು ಹಬ್ಬಿದೆ. 20 ಕಡೆ ಗುಂಪು ಬಾಳೆ ಬೆಳೆದಿದ್ದಾರೆ. ಹಿರಿಯ ವಯಸ್ಸಿನಲ್ಲೂ ಆಸಕ್ತಿಯಿಂದ ತೋಟ ನೋಡಿಕೊಳ್ಳುತ್ತಾರೆ.
ಸಾವಯವ ವಿಧಾನ:
ತೋಟದಲ್ಲಿ ಬೆಳೆದಿರುವ ಹಣ್ಣಿನ ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದಾರೆ. 4 ಬೋರ್‌ವೆಲ್‌ಗಳಿದ್ದು, ಹನಿ ನೀರಾವರಿ ಪದ್ಧತಿ ಮೂಲಕ ಜೀವಾಮೃತವನ್ನು ಗಿಡ, ಮರಗಳಿಗೆ ನೀಡುತ್ತಿದ್ದಾರೆ.ರೋಗ ಬಾಧೆ ಕಾಡದಿರಲು ಬೇವಿನ ರಸವನ್ನು ಸಿಂಪಡಿಸುತ್ತಿದ್ದಾರೆ. ಕಳೆ ಸಸ್ಯಗಳನ್ನು ಕತ್ತರಿಸಿ ಭೂಮಿಯಲ್ಲೇ ಕೊಳೆಸುತ್ತಿದ್ದಾರೆ. ರಾಸಾಯನಿಕ ಬಳಕೆ ಮಾಡದೆ ಕೃಷಿ ಮಾಡುತ್ತಿದ್ದಾರೆ.
ನಾವು ಬೆಳೆಯುವ ಆಹಾರಕ್ಕೆ ರಾಸಾಯನಿಕ ಬಳಕೆ ಮಾಡಿದರೆ ವಿಷವನ್ನೇ ತಿನ್ನುತ್ತೇವೆ. ವಿಷ ಮುಕ್ತ ಆಹಾರದಿಂದ ಆರೋಗ್ಯ ಸಿಗುತ್ತದೆ. ಭೂಮಿಯೂ ಲವತ್ತತೆಯಿಂದ ಕೂಡಿರುತ್ತದೆ. ಸಾವಯವ ವಿಧಾನದಲ್ಲಿ ದುಂದುವೆಚ್ಚವಿಲ್ಲ. ಶ್ರಮವೂ ಕಡಿಮೆ.
ಎಚ್.ದೊರೆರಾಜು, ಮಾದರಿ ಕೃಷಿಕ, ಪಣ್ಯದಹುಂಡಿ, ಚಾಮರಾಜನಗರ