ನೀತಿ ಆಯೋಗ ಪಟ್ಟಿಗೆ ವಡಗೇರಾ

01
Published on

ವಡಗೇರಾ : ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಗುರುತಿಸಲ್ಪಟ್ಟ ಮಹತ್ವಾಕಾಂಕ್ಷಿಯ ಪಟ್ಟಿಗೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಕೇಂದ್ರ ಆಯ್ಕೆಯಾಗಿದೆ.

ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಮೂಲಸೌಕರ್ಯ, ನೈರ್ಮಲ್ಯ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಸೇರಿ ಇತರೆ ೯ ವಲಯಗಳಲ್ಲಿ ಅತೀ ಹಿಂದುಳಿದ ತಾಲೂಕನ್ನು ನೀತಿ ಆಯೋಗ ಬ್ಲಾಕ್‌ಗಳೆಂದು ಗುರುತಿಸಿದ್ದು, ರಾಜ್ಯದಿಂದ ಆಯ್ಕೆಯಾದ ೧೪ ತಾಲೂಕುಗಳಲ್ಲಿ ವಡಗೇರಾ ಕೂಡ ಒಂದಾಗಿದೆ.

೩೯ ಸೂಚ್ಯಂಕ ಪ್ರಗತಿ ಯೋಜನೆ ರೂಪಿಸಿ ರಾಜ್ಯ ಮತ್ತು ರಾಷ್ಟç ಮಟ್ಟದ ಸರಾಸರಿ ಪ್ರಗತಿಗೆ ಸಮನಾಗಿ ತೆಗೆದುಕೊಂಡು ಹೋಗಲು ಸೆ.೩೦ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮವಿದೆ. ಇದರಲ್ಲಿ ಪಾಲ್ಗೊಳ್ಳುವುದಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಹಯ್ಯಾಳ(ಬಿ) ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮಾತನೂರ ಹಾಗೂ ಗುಲಸರಂ ಗ್ರಾಪಂ ಉಪಾಧ್ಯಕ್ಷ ಗೌತಮ ಕ್ರಾಂತಿ ಅವರಿಗೆ ಅವಕಾಶ ಲಭಿಸಿದೆ.

ಈ ಹಿಂದೆ ಅತೀ ಹಿಂದುಳಿದ ಜಿಲ್ಲೆಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿ ನೀತಿ ಆಯೋಗ ಮಹತ್ವಾಕಾಂಕ್ಷಿ ಪಟ್ಟಿಗಳಲ್ಲಿ ಅತೀ ಹಿಂದುಳಿದ ತಾಲೂಕುಗಳನ್ನು ಆಯ್ಕೆ ಮಾಡಿ ಅದರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲು ಮುಂದಾಗಿದೆ. ಈ ಯೋಜನೆಯಡಿ ವಡಗೇರಾ ತಾಲೂಕು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಗೆ ಸೇರಲಿದೆ ಎಂಬ ಆಶಾಭಾವ ಜನರಲ್ಲಿ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net